ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಈ ಕಾರಣದಿಂದ ನದಿಪಾತ್ರದ ಜಮೀನುಗಳಿಗೆ ಪ್ರವಾಹ ಎದುರಾಗಿದ್ದು, ರೈತ ಸಮೂಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಆದ್ದರಿಂದ ಬೆಳೆ ವಿಮೆ ಮಾಡಿಸದ ರೈತರು ಕೂಡಲೇ ಬೆಳೆ ವಿಮೆಗೆ ಮುಂದಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಳೆ ಹಾನಿ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಕಳೆದ ಬಾರಿ ಬರಗಾಲ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. ಆದರೆ ಈ ಬಾರಿ ಮುಂಗಾರು ತಡವಾಗಿ ಪ್ರಾರಂಭವಾದರೂ ಉತ್ತಮ ಮಳೆ ಯಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ತಾಲೂಕಿನ ದಂಡಾವತಿ ಮತ್ತು ವರದಾ ನದಿಗಳು ಈಗಾಗಲೇ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿವೆ. ವಿಶೇಷವಾಗಿ ವರದಾ ನದಿ ಪ್ರವಾಹದಿಂದ ತಾಲೂಕಿನ ಅಬಸೆ, ಕಡಸೂರು, ಹೊಳೆಜೋಳದಗುಡ್ಡೆ, ತಟ್ಟಿಕೆರೆ, ಹೆಚ್ಚೆ, ಹಿರೇನೆಲ್ಲೂರು, ಸೈದೂರು, ತಾಳಗುಪ್ಪ ಗ್ರಾಮಗಳ ರೈತರ ಜಮೀನುಗಳು ಜಲಾವೃತವಾಗಿವೆ. ಸುಮಾರು ೬೫೦ ಹೆಕ್ಟೇರ್ ಭತ್ತ ಮುಳುಗಡೆಯಾಗಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ೧೧೯೫೭ ಹೆಕ್ಟೇರ್ ಮೆಕ್ಕೆಜೋಳ, ಭತ್ತ ವಿಮೆ ಪ್ರಸ್ತಾವನೆಯಾಗಿದೆ. ಅದರಲ್ಲಿ ಸೊರಬ ತಾಲೂಕಿನ ೨೮೧೩ ಹೆಕ್ಟೇರ್ ಬೆಳೆಗೆ ವಿಮೆ ಸಂದಾಯವಾಗಿದೆ. ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಶುಂಠಿಗೆ ಜಿಲ್ಲೆಯ ೨೨೧೮೩ ಹೆಕ್ಟೇರ್ ಪ್ರಸ್ತಾವನೆಯಲ್ಲಿ ತಾಲೂಕಿನ ೫೭೬೩ ಹೆಕ್ಟೇರ್‌ಗೆ ವಿಮೆಗೆ ಹಣ ಸಂದಾಯವಾಗಿದೆ. ಇನ್ನೂ ವಿಮೆ ಮಾಡಿಸದ ರೈತರಿಗೆ ಜುಲೈ ೩೧ರವರೆಗೆ ಅವಕಾಶವಿದೆ. ರೈತರು ಇದರ ಸದುಪಯೋಗಪಡೆಯಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ. ೩೬ರಷ್ಟು ಮಳೆ ಕೊರತೆ ಎದುರಾಗಿತ್ತು. ಆದರೆ ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ ೪೨೩ ಮಿ.ಮೀ. ಆಗಿದೆ. ಆದರೆ ೫೭೭ ಮಿ.ಮೀ. ಮಳೆಯಾಗಿದ್ದು, ಶೇ. ೩೬ರಷ್ಟು ಅಧಿಕ ಮಳೆಯಾಗಿದೆ. ತಾಲೂಕಿನಾದ್ಯಂತ ೨೧ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ೨ ಎಮ್ಮೆ, ಒಂದು ಹಸು ಮೃತಪಟ್ಟಿವೆ. ಈ ಕಾರಣ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನೆರೆ ಪ್ರದೇಶದ ಗ್ರಾಮ ಮತ್ತು ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.ಮಳೆಯಿಂದ ಮನೆಯ ಒಂದು ಭಾಗದ ಗೋಡೆ ಬಿದ್ದರೆ ಇಡೀ ಮನೆಗೆ ಹಾನಿಯಾದಂತೆ. ಹಾಗಾಗಿ ಅಧಿಕಾರಿಗಳು ಸಂಪೂರ್ಣ ಪರಿಹಾರಕ್ಕೆ ಇಂಥಹ ಮನೆಗಳನ್ನೂ ಪರಿಗಣಿಸಬೇಕು ಎಂದ ಅವರು, ರಸ್ತೆಗಳಲ್ಲಿ ಸರಾಗವಾಗಿ ನೀರು ಹರಿಯದೇ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಜಿ.ಪಂ. ಮತ್ತು ಪಿ.ಡಬ್ಲ್ಯೂಡಿ ಇಲಾಖೆ ಹೆಚ್ಚಿನ ಹರಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಕಾಲುವೆ ನಿರ್ಮಿಸುವ ಮೂಲಕ ನೀರು ಸರಾಗವಾಗಿ ಹರಿಯಲು ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ಮಂಜುಳಾ ಹೆಗಡಾಳ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಮಾಜಿ ಶಾಸಕ ಕುಮಾರ ಬಂಗಾರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಕಾರ್ಯ ದರ್ಶಿ ದೇವೇಂದ್ರಪ್ಪ ಚನ್ನಾಪುರ, ಮುಖಂಡರಾದ ಗುರುಕುಮಾರ ಪಾಟೀಲ್, ಪ್ರಕಾಶ್ ಅಗಸನಹಳ್ಳಿ ಮೊದಲಾದವರು ಇದ್ದರು.