ಸಾರಾಂಶ
ಚಾಮರಾಜನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ಬೈಕ್ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ತಿಳಿಸಿದರು. ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಹಾಗೂ ರೋಟರಿ ಸಿಲ್ಕ್‌ಸಿಟಿ ಹಾಗೂ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ನಡೆದ ರಸ್ತೆ ಸುರಕ್ಷತಾ ಸಪ್ತಾಹ-2025 ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಮಾತನಾಡಿದರು. ರಸ್ತೆಯ ಮೇಲೆ ವಾಹನಗಳನ್ನು ಓಡಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪ್ರತಿಯೊಬ್ಬರು 18 ವರ್ಷದ ನಂತರ ವಾಹನ ಚಾಲನೆ ಪರವಾನಿಗಿ ಪಡೆದು ವಾಹನಗಳನ್ನು ಚಾಲನೆ ಮಾಡಬೇಕು. ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನದ ಮಾಲೀಕರು 25 ಸಾವಿರ ರು. ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಬೇಡಿ, ಅಲ್ಲದೇ ಈ ಸಂದರ್ಭದಲ್ಲಿ ಅಪಘಾತವಾದರೆ, ಯಾವುದೇ ರೀತಿ ಪರಿಹಾರ ದೊರೆಯುವುದಿಲ್ಲ. ಅಪಘಾತಕ್ಕೀಡಾದ ವ್ಯಕ್ತಿ ಸಾವಿಗೀಡಾದರೆ, ಗಾಯಗೊಂಡರೆ ಮಾಲಿಕನೇ ಪರಿಹಾರ ನೀಡಬೇಕಾಗುತ್ತದೆ ಎಂದರು. ಚಾಮರಾಜನಗರ ಜಿಲ್ಲಾ ಕೇಂದ್ರವಾದರೂ ರಸ್ತೆ ಸುರಕ್ಷತೆಗೆ ಅಳವಡಿಸುವ ಮಾರ್ಗಗಳು ಕಡಿಮೆ, ಕಿರಿದಾದ ರಸ್ತೆಗಳು ಹಾಗೂ ಪುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿರುವುದು, ವಾಹನ ಸವಾರರು ನಿಯಮಗಳನ್ನು ಪಾಲನೆ ಮಾಡದಿರುವುದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈಗಾಗಲೇ ಪುಟ್‌ಪಾತ್‌ನಲ್ಲಿ ತಮ್ಮ ಅಂಗಡಿಗಳ ಬೋರ್ಡ್ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡಿರುವವರ ವಿರುದ್ಧ ಪ್ರಕರಣ ದಾಖಲು ಮಾಡಿ, ನೋಟೀಸ್ ಜಾರಿ ಮಾಡಿದ್ದೇವೆ ಎಂದರು. ರೋಟರಿ ಸದಸ್ಯರಾದ ದೊಡ್ಡರಾಯಪೇಟೆ ಗಿರೀಶ್, ನಾರಾಯಣ್, ಅಂಕಶೆಟ್ಟಿ, ಎಸ್‌ಆರ್‌ಎಸ್ ಶ್ರೀನಿವಾಸ್ ಇತರರು ಪುಟ್‌ಪಾತ್ ರಸ್ತೆಗಳನ್ನುಅಕ್ರಮಿಕೊಂಡಿರುವುದರಿಂದ ದಾರಿಹೋಕರು ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಇದನ್ನು ತಪ್ಪಿಸಲು ಮೊದಲು ಇದನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ಭುವನೇಶ್ವರಿ ವೃತ್ತದಲ್ಲಿ ಸಾರಿಗೆ ಬಸ್‌ಗಳು ನಿಲುಗಡೆಯಿಂದ ಪದೇ ಪದೇ ಟ್ರಾಫಿಕ್ ಜಮ್ ಆಗುತ್ತಿದೆ. ಬಸ್ ನಿಲುಗಡೆಯನ್ನು ಮುಂದೆ ಮಾಡಿ ಎಂದು ಸಲಹೆ ನೀಡಿದರು. ಸಭೆಯಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ತಾಲೂಕಿನ ಹಂಡ್ರಕಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ಟ್ರಸ್ಟ್ನ ಅಧ್ಯಕ್ಷ ಸಿ. ಲಕ್ಷ್ಮೀಕಾಂತ್ ವಿತರಣೆ ಮಾಡಿದರು.ಸಭೆಯಲ್ಲಿ ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಕಾರ್ಯದರ್ಶಿ ಎಚ್.ಎಂ. ಗುರುಸ್ವಾಮಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ ಚಂದ್ ಸಿರವಿ, ಕಾರ್ಯದರ್ಶಿ ಶಮಿತ್‌ಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಮಮತಾ, ರೋಟರಿಯನ್‌ಗಳು ಇದ್ದರು.