ಸಾರಾಂಶ
ಮಿಠಾಯಿ ಅಂಗಡಿಗಳ ವರ್ತಕರು ಸಹ ಸಾಮಾಜಿಕ ಸಂದೇಶದ ನಾಮಫಲಕ ಅಳವಡಿಸುವ ಮೂಲಕ ಕಳಕಳಿಯ ಸಂದೇಶ ಸಾರುತ್ತಿದ್ದಾರೆ.
ಮಿಠಾಯಿ ಅಂಗಡಿಗಳಲ್ಲಿ ಜಾಗೃತಿ ನುಡಿ, ಸಾಮಾಜಿಕ ಕಳಕಳಿಯ ಸಂದೇಶ
ಅಮರೇಶ್ವರಸ್ವಾಮಿ ಕಂದಗಲ್ಲಮಠಕನ್ನಡಪ್ರಭ ವಾರ್ತೆ ಕೊಪ್ಪಳಗವಿಸಿದ್ಧೇಶ್ವರ ರಥೋತ್ಸವಕ್ಕೆ ಬಂದವರೆಲ್ಲ ಇದು ಸಾಮಾಜಿಕ ಜನ ಜಾಗೃತಿ ಜಾತ್ರೆ ಎಂದು ಬಣ್ಣಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ವ್ಯಾಪಾರ ವಹಿವಾಟಿಗೆ ಬಂದಿರುವ ಮಿಠಾಯಿ ಅಂಗಡಿಗಳ ವರ್ತಕರು ಸಹ ಸಾಮಾಜಿಕ ಸಂದೇಶದ ನಾಮಫಲಕ ಅಳವಡಿಸುವ ಮೂಲಕ ಕಳಕಳಿಯ ಸಂದೇಶ ಸಾರುತ್ತಿದ್ದಾರೆ.
ಜಾತ್ರೆಯ ಆವರಣದಲ್ಲಿ ವ್ಯಾಪಾರಕ್ಕೆಂದು ಬಂದಿರುವ ಮಿಠಾಯಿ ಅಂಗಡಿಗಳಲ್ಲಿ ಹಾಕಿರುವ ಜಾಗೃತಿಯ ಸಂದೇಶದ ನಾಮಫಲಕವನ್ನು ಇಲ್ಲಿಗೆ ಬಂದವರು ಒಮ್ಮೆ ಓದಬೇಕು. ಇಲ್ಲೊಂದು ಮಿಠಾಯಿ ಅಂಗಡಿಯಲ್ಲಿ ಮೊಬೈಲ್ ಮಕ್ಕಳ ಮೆದುಳಿಗೆ ಮಾರಿ, ಪುಸ್ತಕ ಉತ್ತಮ ಬಾಳಿಗೆ ದಾರಿ, ಮಕ್ಕಳಿಗೆ ಪುಸ್ತಕ ಉಡುಗೊರೆ ನೀಡಿ, ಮೊಬೈಲ್ ಬೇಡ, ಮಕ್ಕಳು ರಾಷ್ಟ್ರದ ಆಸ್ತಿ, ಅವರ ರಕ್ಷಣೆ ನಮ್ಮ ಹೊಣೆ ಎಂಬ ಮಾತುಗಳನ್ನು ಬ್ಯಾನರ್‌ನಲ್ಲಿ ಹಾಕಲಾಗಿದೆ. ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿರುವುದನ್ನು ಇದು ಎದ್ದು ತೋರಿಸುತ್ತದೆ. ಮಕ್ಕಳು ಮನೆಯಲ್ಲಿ ಒಂದು ದಿನ ಸಹ ಪುಸ್ತಕ ಹಿಡಿದಿದ್ದು, ಕಂಡಿಲ್ಲವಲ್ಲ ಎಂದು ಪಾಲಕರು ಮನವರಿಕೆ ಮಾಡಿಕೊಳ್ಳುವ ಸಂದೇಶ ಮಿಠಾಯಿ ಅಂಗಡಿಯಲ್ಲಿದೆ.ಅಲ್ಲದೆ ಇನ್ನೊಂದು ಅಂಗಡಿಯಲ್ಲಿ ಭಾರತೀಯ ಧರ್ಮದ ಪವಿತ್ರ ಗ್ರಂಥ ಸಂವಿಧಾನ, ನಮ್ಮ ಸಂವಿಧಾನ ನಮ್ಮ ಅಭಿಮಾನ, ಸಂವಿಧಾನಕ್ಕಾಗಿ ನಾವು ನಮಗಾಗಿ ಸಂವಿಧಾನ ಎಂಬ ಮಾತು ಭಾರತದ ಸಂವಿಧಾನದ ಬಗ್ಗೆ ಜನರಲ್ಲಿ ಆತ್ಮಗೌರವ ಹೆಚ್ಚು ಮಾಡುತ್ತದೆ.
ಮತ್ತೊಂದು ಅಂಗಡಿಯಲ್ಲಿ ಈ ವರ್ಷದ ಜಾತ್ರೆಯ ಜಾಗೃತಿ ನುಡಿ ವಿಕಲಚೇತನರ ನಡೆ ಸಕಲಚೇತನದ ಕಡೆ ಎಂಬ ಧ್ಯೇಯವನ್ನು ಸಹ ಅಳವಡಿಸಿದ್ದಾರೆ. ಅನುಕಂಪ ಬೇಡ ಅವಕಾಶ ನೀಡಿ ಎಂದು ವಿಕಲಚೇತನರು ಸಹ ಸಬಲರು ಎಂದು ಸಾರಲಾಗಿದೆ.ಸೈಬರ್ ಅಪರಾಧಿಗಳಿಗೆ ಆಟ, ದುಡಿಯುವ ಮನಗಳಿಗೆ ಸಂಕಟ, ಸೈಬರ್ ಕ್ರೈಂನಿಂದ ಎಚ್ಚರವಹಿಸಿ ಎಂದು ಮಿಠಾಯಿ ಅಂಗಡಿಯಲ್ಲಿ ಸೈಬರ್ ಮೋಸದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಸರ್ಕಾರದ ಉಚಿತ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಭದ್ರತೆ ಎಂಬ ಸಂದೇಶದ ಅಳವಡಿಕೆ ಸಹ ಸರ್ಕಾರದ ಮಹಿಳೆಯರಿಗೆ ನೀಡಿರುವ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಆಗುತ್ತಿರುವ ಆರ್ಥಿಕ ಲಾಭ ಸಾರುತ್ತಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ ಯೋಜನೆಯಿಂದ ಮಹಿಳೆ ಸಹ ಆರ್ಥಿಕವಾಗಿ ಸಬಲವಾಗುತ್ತಿದ್ದಾಳೆ ಎಂದು ಮಿಠಾಯಿ ಅಂಗಡಿಯೊಂದರ ಜಾಗೃತಿ ಫಲಕ ಸಾರುತ್ತಿದೆ.ಜಾಗೃತಿ ನುಡಿ, ಸಾಮಾಜಿಕ ಕಳಕಳಿಯ ಈ ನುಡಿಗಳು ಜಾತ್ರೆಗೆ ಆಗಮಿಸುವ ಭಕ್ತರ ಗಮನ ಸೆಳೆಯುತ್ತಿವೆ.
ಮಠದಿಂದ ಪ್ರತಿ ವರ್ಷ ನಾನಾ ಸಾಮಾಜಿಕ ಜಾಗೃತಿ, ಪರಿವರ್ತನೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ವ್ಯಾಪಾರಿಗಳ ಮೇಲೂ ಪ್ರಭಾವ ಬೀರಿದಂತಿದೆ. ಜನರು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಸಂದೇಶ ಕಂಡು ತಾವೂ ಬದಲಾಗುತ್ತೇವೆ ಎನ್ನುವ ಶಪಥ ಮಾಡುತ್ತಿದ್ದಾರೆ. ಗವಿಶ್ರೀಗಳ ಸಾಮಾಜಿಕ ಕಳಕಳಿ ನಮ್ಮ ಮೇಲೆ ಪ್ರಭಾವ ಬೀರಿದೆ. ವ್ಯಾಪಾರದ ಜೊತೆಗೆ ಸಾಮಾಜಿಕ ಸಂದೇಶ ಕೊಡಬೇಕು ಎಂದು ಹಿತನುಡಿಗಳ ಅಳವಡಿಕೆ ಕಾರ್ಯ ಮಾಡಿದ್ದೇವೆ ಎನ್ನುತ್ತಾರೆ ಮಿಠಾಯಿ ಅಂಗಡಿಯವರು.