ಕಳೆದ ವರ್ಷ ಜಿಲ್ಲೆಯಲ್ಲಿ ನಡೆದಿದ್ದ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಹಾಗೂ ಚಡಚಡಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಗಳು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದವು. ಇದೀಗ ಜ.26ರಂದು ಸಿನಿಮೀಯ ರೀತಿಯಲ್ಲಿ ನಡೆದ ಮತ್ತೊಂದು ದರೋಡೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಕನ್ನಡಪ್ರಭ ವಾರ್ತೆ ಚಡಚಣ/ವಿಜಯಪುರ

ಕಳೆದ ವರ್ಷ ಜಿಲ್ಲೆಯಲ್ಲಿ ನಡೆದಿದ್ದ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಹಾಗೂ ಚಡಚಡಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಗಳು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದವು. ಇದೀಗ ಜ.26ರಂದು ಸಿನಿಮೀಯ ರೀತಿಯಲ್ಲಿ ನಡೆದ ಮತ್ತೊಂದು ದರೋಡೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಸೋಮವಾರ ಮಟಮಟ ಮಧ್ಯಾಹ್ನ 3.33ರ ವೇಳೆಗೆ ಮುಖಕ್ಕೆ ಹೆಲ್ಮೆಟ್ ಹಾಕಿಕೊಂಡು, ಕೈಯಲ್ಲಿ ಗನ್ ಹಿಡಿದು ಬಂದ ದರೋಡೆಕೋರರಿಬ್ಬರೂ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿರುವ ಮಹಾರುದ್ರ ಕಂಚಗಾರಗೆ ಸೇರಿದ ಭೂಮಿಕಾ ಜ್ಯೂವೆಲರಿ ಶಾಪ್‌ಗೆ ನುಗ್ಗಿ, ಅಂಗಡಿಯಲ್ಲಿನ ಚಿನ್ನವನ್ನೆಲ್ಲ ದೋಚಿದ್ದಾರೆ.‌ ಈ ವೇಳೆ ಅಂಗಡಿ ದೋಚುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿಯಲು ಮುಂದಾದಾಗ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ದೃಶ್ಯ ಸೆರೆಹಿಡಿಯಲು ಮುಂದಾಗಿದ್ದ ಗ್ರಾಮದ ಆತ್ಮಲಿಂಗ ಹೂಗಾರ ಎಂಬಾತನ ಬಲಗಾಲಿಗೆ ಗುಂಡು ಬಿದ್ದಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ. ಭಯಾನಕ ದರೋಡೆಯ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.ಫೆಸ್ ಪ್ಯಾಕ್ ಮಾಡಿಕೊಂಡು ದರೋಡೆ:

ದರೋಡೆಗೆ ಬಂದವರು ತಮ್ಮ ಗುರುತು ಪತ್ತೆಯಾಗದಿರಲಿ ಎಂದು ತಲೆಗೆ ಹೆಲ್ಮೆಟ್ ಹಾಗೂ ಕಪ್ಪು ಬಣ್ಣದ ಜಾಕೇಟ್, ಕೈಗೆ ಗ್ಲೌಸ್ ಧರಿಸಿದ್ದರು. ದರೋಡೆಗೆ ಕಪ್ಪು ಬಣ್ಣದ ಯುನಿಕಾರ್ನ್ ಬೈಕ್ ಬಳಕೆ ಮಾಡಿದ್ದಾರೆ‌. ಅಂಗಡಿಗೆ ನುಗ್ಗಿದವರು ಮೊದಲು ಸ್ಥಳೀಯರಿಗೆ ಗನ್ ತೋರಿಸಿ ಹೆದರಿಸಿದ್ದಾರೆ‌. ಅಂಗಡಿಯ ಮುಂದೆಯಿದ್ದ ಅಜ್ಜಿಯೊಬ್ಬಳಿಗೆ ಗನ್ ತೋರಿಸುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ 205 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆಜಿ ಬೆಳ್ಳಿ ದರೋಡೆ ಮಾಡಿರೋದು ಬೆಳಕಿಗೆ ಬಂದಿದೆ. ಸಿಸಿ ಕ್ಯಾಮರಾದಲ್ಲಿ ಸಿಕ್ಕಿರೋ ದೃಶ್ಯಗಳನ್ನು ಆಧರಿಸಿ ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ. ದರೋಡೆಕೋರರು ಚಿನ್ನದೋಚಿ ನೆರೆಯ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಲಸಂಗಿ ಮಹಾರಾಷ್ಟ್ರದ ಗಡಿ ಗ್ರಾಮವಾಗಿದ್ದು ನೆರೆಯ ಮಹಾರಾಷ್ಟ್ರದಿಂದಲೇ ಬಂದ ದರೋಡೆಕೋರರೆ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ:

ಚಿನ್ನದಂಗಡಿ ದರೋಡೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆಗೆ ಇಳಿದಿದ್ದಾರೆ.

ಹಲಸಂಗಿಯ ಮಹಾರುದ್ರ ಕಂಚಗಾರ ಎಂಬಾತನ ಬಂಗಾರದ ಅಂಗಡಿಯಲ್ಲಿದ್ದ 205 ಗ್ರಾಂ ಬಂಗಾರದ ಆಭರಣ ಹಾಗೂ ಒಂದು ಕೆಜಿ ಬೆಳ್ಳಿಯನ್ನು ದೋಚಲಾಗಿದೆ. ಈ ವೇಳೆ ಪಕ್ಕದ ಮೊಬೈಲ್ ಅಂಗಡಿಯವನಾದ ಅನಿಲ ಗಲಗಲಿ ಎಂಬಾತ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿ ಆ ವ್ಯಕ್ತಿಯ ಕಡೆಗೆ ಕಳ್ಳ ಗುಂಡು ಹಾರಿಸಿದ್ದು ಅದು ಆ ವ್ಯಕ್ತಿಯ ಪಕ್ಕದಲ್ಲೇ ಇದ್ದ ಯುವಕನ ಕಾಲಿಗೆ ತಗುಲಿದೆ. ಪೊಲೀಸ್ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ.

ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ

ಮಧ್ಯಾಹ್ನ ಇಬ್ಬರು ಮುಸುಕುಧಾರಿಗಳು ಮಹಾರುದ್ರ ಕಂಚಗಾರ ಚಿನ್ನದಂಗಡಿಗೆ ಬಂದು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಇಡಿ ಚಿನ್ನದಂಗಡಿಯನ್ನೇ ದೋಚಿದ್ದಾರೆ. ಅವರು ದರೋಡೆ ಮಾಡುವುದನ್ನು ನಾನು ನನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವಾಗ ನನ್ನ ಕಡೆ ಗುಂಡು ಹಾರಿಸಿದ್ದಾರೆ. ಈ ವೇಳೆ ನನ್ನ ಪಕ್ಕದಲ್ಲಿದ್ದ ವ್ಯಕ್ತಿಯ ಕಾಲಿಗೆ ಗುಂಡು ತಗುಲಿದೆ. ಈ ಘಟನೆ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

- ಪ್ರತ್ಯಕ್ಷದರ್ಶಿ.