ಗಣರಾಜ್ಯೋತ್ಸವ ನಿಮಿತ್ತ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ಅಧಿದೇವತೆ ಮಹಾಲಕ್ಷ್ಮೀಯನ್ನು ತ್ರಿವರ್ಣ ಧ್ವಜ ಬಣ್ಣ ಹೋಲುವ ಸೀರೆಯ ಅಲಂಕಾರ ಮಾಡಿ ಪೂಜೆ ನೇರವೇರಿಸಿದ್ದು ಜನತೆಯ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ಗಣರಾಜ್ಯೋತ್ಸವ ನಿಮಿತ್ತ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ಅಧಿದೇವತೆ ಮಹಾಲಕ್ಷ್ಮೀಯನ್ನು ತ್ರಿವರ್ಣ ಧ್ವಜ ಬಣ್ಣ ಹೋಲುವ ಸೀರೆಯ ಅಲಂಕಾರ ಮಾಡಿ ಪೂಜೆ ನೇರವೇರಿಸಿದ್ದು ಜನತೆಯ ಗಮನ ಸೆಳೆಯಿತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ್ ವಿಜ್ಞಾನ ಪಿಯು ಕಾಲೇಜಿನ ಆಡಳಿತ ಅಧಿಕಾರಿ ಹಾಗೂ ದೇವಿಯ ಭಕ್ತರಾದ ಅಮೀತಗೌಡ ಪಾಟೀಲ ಅವರು 3 ವರ್ಷಗಳಿಂದ ಆಗಸ್ಟ್‌ 15 ಹಾಗೂ ಜನವರಿ 26ರಂದು ಶ್ರೀದೇವಿಗೆ ತ್ರಿವರ್ಣ ಧ್ವಜದ ಅಲಂಕಾರ ಮಾಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಭಕ್ತರ ಕೋರಿಕೆಯಂತೆ ಈ ಬಾರಿ ದೇವಿಯನ್ನು ತ್ರಿವರ್ಣ ಬಣ್ಣದ ಸೀರೆಯಿಂದ ಅಲಂಕರಿಸಲಾಗಿತ್ತು ಎಂದು ಅರ್ಚಕ ಸುರೇಶ್‌ ಆರ್‌.ಜಿ.ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಸೋಮವಾರ ಶ್ರೀದೇವಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆದವು. ದೈವಿಭಕ್ತಿಯ ಜತೆಗೆ ದೇಶಭಕ್ತಿಯ ಅನನ್ಯ ಸಂಗಮವಾಗಿತ್ತು. ಇತಿಹಾಸ ಪರಂಪರೆ ಹೊಂದಿರುವ ಮುತ್ತೂರು ಮಹಾಲಕ್ಷ್ಮೀ ದೇವಿಗೆ ತ್ರಿವರ್ಣ ಧ್ವಜ ಹೋಲುವ ವಿಶೇಷ ಸೀರೆ ಅಲಂಕಾರದಲ್ಲಿ ಕಂಗೊಳಿಸಿದಳು. ದೇವಿಯಲ್ಲಿ ಭಾರತಾಂಬೆಯ ಪ್ರತಿರೂಪ ಕಾಣಲು ಭಕ್ತ ಸಾಗರವೇ ಹರಿದು ಬಂದಿತ್ತು. ವಿಶೇಷ ಪುಜಾ ಕಾರ್ಯಕ್ರಮ ನಡೆದವು. ಅರ್ಚಕ ಹನುಮಂತ ಗುರುವ ತಂಡದವರು ದೇವಿಯ ಅಲಂಕಾರ ಮಾಡಿದ್ದರು.