ಹಾವೇರಿ: ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸಿ, ₹40 ಲಕ್ಷ ನಗದು, ಒಂದು ಸ್ವಿಪ್ಟ್ ಹಾಗೂ ಒಂದು ಮಹಿಂದ್ರಾ ಥಾರ್ ಸೇರಿದಂತೆ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಯಶೋದಾ ವಂಟಗೋಡಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಧಾರವಾಡದ ಅನ್ವರ್ ಮುಕ್ತುಮಸಾಬ್ (30), ಹಿರೇಕುಂಬಿಯ ಹಜರತ್ತಲಿ ಮುಕ್ತುಮಸಾಬ ಲಗಳಿ (30), ಹಾವೇರಿಯ ಅಮೀರಖಾನ್ ಅಬ್ದುಲ್‌ಖಾನ್ ಪಠಾಣ (32), ಕಿತ್ತೂರಿನ ಇಬ್ರಾಹಿಂ ರಿಯಾಜ್ ಅಹಮ್ಮದ್ ಬೀಡಿ (28), ಹುಬ್ಬಳ್ಳಿಯ ಆಸ್ಪಕ್ ಬಾಬುಲಾಲ ಚನ್ನಾಪುರ (33), ಸದ್ದಾಂ ಮಹಮ್ಮದ್ ರಫೀಕ್ ಹಕೀಮ (33), ರಫೀಕ ಗುಡುಸಾಬ ಎಲಿಗಾರ (33), ಆಸ್ಪಕ್ ಮಹಬೂಬಸಾಬ ಮಕಾಂದಾರ (33), ಜಿಷಾನ್ ಮಹಬೂಬಸಾಬ ಕಂಚಗಾರ (32) ಎಂಬುವವರನ್ನು ಬಂಧಿಸಲಾಗಿದ್ದು, ಲಾರಿಯ ಸಹ ಚಾಲಕನೇ ಪ್ರಕರಣದ ಪ್ರಮುಖ ರೂವಾರಿ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು. ಏನಿದು ಪ್ರಕರಣ..? ಮಾ.27ರ ತಡರಾತ್ರಿ ಕೃತ್ಯ ನಡೆದಿದೆ. ಲಾರಿಯನ್ನು ಚಾಲಕ ಶರಣಪ್ಪ ಎಂಬುವವರು ಚಲಾಯಿಸುತ್ತಿದ್ದು, ಲಾರಿಯ ಮಾಲಿಕ ರಿಯಾಜ್ ಅಹಮ್ಮದ ಹಣಸಿ ಹಾಗೂ ಸಹ ಚಾಲಕ ಅನ್ವರ್ ಮುಕ್ತುಮಸಾಬ ಜತೆಗಿದ್ದರು. ರಾತ್ರಿ 11.45ರ ವೇಳೆ ಮೊಟೆಬೆನ್ನೂರು ಬಳಿ ಕಾರಿನಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ಚಾಲಕ ಶರಣಪ್ಪ ಮತ್ತು ಇತರರನ್ನು ಬೆದರಿಸಿ ಲಾರಿಯ ಟೂಲ್ ಬಾಕ್ಸ್ನಲ್ಲಿದ್ದ ಹಣದ ಬ್ಯಾಗ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ಲಾರಿಯಲ್ಲಿದ್ದವರ ಮೊಬೈಲ್‌ಗಳನ್ನು ಸಹ ಕಿತ್ತುಕೊಂಡಿದ್ದಾರೆ ಎಂದು ಲಾರಿ ಮಾಲೀಕ ರಿಯಾಜ್ ಅಹಮ್ಮದ್ ಬ್ಯಾಡಗಿ ಠಾಣೆಗೆ ದೂರು ನೀಡಿದ್ದರು.ಆರೋಪಿಗಳ ಪತ್ತೆಗಾಗಿ ಎಸ್‌ಪಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್‌ಪಿ ಎಲ್. ವೈ. ಶಿರಕೋಳ ಮಾರ್ಗದರ್ಶನದಲ್ಲಿ ಬ್ಯಾಡಗಿ ಸಿಪಿಐ ಎಂ.ಬಿ. ಚಿಕ್ಕಣ್ಣನವರ, ಪಿಎಸ್‌ಐಗಳಾದ ಭಾರತಿ ಕುರಿ, ಎನ್.ಕೆ. ನಿಂಗನಹಳ್ಳಿ ಮತ್ತು ಸಿಬ್ಬಂದಿಯ ತಂಡ ರಚಿಸಿ ತನಿಖೆ ಕೈಗೊಳ್ಳಲಾಯಿತು. ಆದರೆ, ಪೊಲೀಸ್ ದೂರಿನಲ್ಲಿ ಲಾರಿಯಲ್ಲಿ ಎಷ್ಟು ಹಣ ಕೊಂಡೊಯ್ಯಲಾಗುತ್ತಿತ್ತು ಎಂಬ ಬಗ್ಗೆ ಉಲ್ಲೇಖಿಸಿರಲಿಲ್ಲ. ಹುಬ್ಬಳ್ಳಿಯ ವಿನೋದ ರಾಠೋಡ ಎಂಬುವರು ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಯ ಸಲುವಾಗಿ ಬ್ಯಾಗಿನಲ್ಲಿ ಹಣ ತುಂಬಿ ಕೊಟ್ಟಿದ್ದರು, ಅದನ್ನು ಟೂಲ್ ಬಾಕ್ಸನಲ್ಲಿ ಇಟ್ಟಿದ್ದು ಆ ಹಣ ದರೋಡೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಲಾರಿಯಲ್ಲಿ ಎಷ್ಟು ಹಣ ಇತ್ತು ? ವಿನೋದ ರಾಠೋಡ ಯಾರು? ಈ ಹಣ ಅಸಲಿಗೆ ಯಾವುದರ ಸಲುವಾಗಿ ಕೊಂಡೊಯ್ಯಲಾಗುತ್ತಿತ್ತು ಎಂಬುದರ ಬಗ್ಗೆ ಅನುಮಾನಗಳಿದ್ದು, ತನಿಖೆಯಲ್ಲಿ ಸತ್ಯ ಹೊರಬರಬೇಕಿದೆ. ವಿನೋದ ರಾಠೋಡ ಅವರ ವಿಳಾಸ ಪಡೆದು ಅವರಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.ಮೊಬೈಲ್ ಕರೆಯಿಂದ ಬಯಲು: ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ಲಾರಿಯ ಸಹ ಚಾಲಕ ಅನ್ವರ್ ಇತರ ಆರೋಪಿಗಳೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದಿದ್ದು ಗೊತ್ತಾಗಿದೆ. ಅನ್ವರ್ ಅವರನ್ನು ವಿಚಾರಣೆ ನಡೆಸಿದಾಗ ಆತ, ಲಾರಿಯಲ್ಲಿ ಹಣ ಇರುವುದು ಮತ್ತು ಲಾರಿ ಎಲ್ಲಿ ಹೋಗುತ್ತಿದೆ ಎಂಬ ಎಲ್ಲ ಮಾಹಿತಿಗಳನ್ನು ತನ್ನ ಸಹಚರರಿಗೆ ಕೊಟ್ಟಿರುವುದಾಗಿ ಬಾಯಿಬಿಟ್ಟಿದ್ದಾನೆ. ಇದರ ಆಧಾರದಲ್ಲಿಯೇ ಆರೋಪಿಗಳು ಲಾರಿ ತಡೆದು ದರೋಡೆ ನಡೆಸಿದ್ದಾಗಿ ತಿಳಿಸಿದ್ದಾನೆ ಎಂದು ಎಸ್‌ಪಿ ಯಶೋದಾ ವಂಟಗೋಡಿ ವಿವರಿಸಿದರು.