ದಾಂಡೇಲಿ: ಶಿಕ್ಷಣ ಮತ್ತು ಸೇವೆ ಹಾಗೂ ವೃತ್ತಿ ಬದುಕಿಗೆ ವ್ಯಕ್ತಿತ್ವವೇ ಭೂಷಣ. ಇಂತಹ ಜನಪರ, ಬಡವರ ಪರ ಸದಾ ಕಾಳಜಿಯನ್ನು ಇಟ್ಟುಕೊಂಡು ಪವಿತ್ರ ಮನಸ್ಸಿನಿಂದ ಆರೋಗ್ಯ ಸೇವೆ ನೀಡಿದ ಡಾ. ಆರ್.ಕೆ. ಕುಲಕರ್ಣಿಯವರು ದಾಂಡೇಲಿಯಲ್ಲಿ ನೀಡಿದ ಸುದೀರ್ಘ 45 ವರ್ಷಗಳ ಆರೋಗ್ಯ ಸೇವೆ ಸದಾ ಸ್ಮರಣೀಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಹೇಳಿದರು.

ಕಳೆದ 45 ವರ್ಷಗಳಿಂದ ದಾಂಡೇಲಿಯಲ್ಲಿ ಆರೋಗ್ಯ ಸೇವೆ ನೀಡಿ ಇದೀಗ ವಯಸ್ಸಿನ ಕಾರಣದಿಂದ ಧಾರವಾಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಹಿರಿಯ ವೈದ್ಯ ಡಾ.ಆರ್.ಕೆ.ಕುಲಕರ್ಣಿ ಅವರಿಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ ನೆರವೇರಿಸಿ ಮಾತನಾಡಿದರು.

ಈ ವೇಳೆ, ದಾಂಡೇಲಿಯಲ್ಲಿ ಕುಲಕರ್ಣಿ ಅವರು ಸಲ್ಲಿಸಿದ ಸೇವೆ ಸ್ಮರಿಸಿದ ಅವರು, ರೋಗಿಗಳನ್ನು ಪ್ರೀತಿ, ಆತ್ಮೀಯತೆಯಿಂದ ಕಾಣುವ ಮೂಲಕ ಆರೋಗ್ಯ ನೆಮ್ಮದಿಯನ್ನು ಕಾಣುವಂತಾಗಲು ಅವಿರತ ಸೇವೆ ವಿಶೇಷವಾಗಿದೆ. ಸತ್ಪುರುಷ ಶ್ರೀ ದಾಂಡೇಲಪ್ಪ ಡಾ. ಆರ್.ಕೆ. ಕುಲಕರ್ಣಿ ಅವರಿಗೆ ಸದಾ ಆಯುರಾರೋಗ್ಯವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.

ರೋಟರಿ ಕ್ಲಬ್ ವತಿಯಿಂದ ಡಾ. ಆರ್.ಕೆ. ಕುಲಕರ್ಣಿ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಆರ್.ಕೆ. ಕುಲಕರ್ಣಿ ಅವರು ಮನುಷ್ಯ ಜೀವನ ಅತ್ಯಂತ ಶ್ರೇಷ್ಠ. ಮಾನವರಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ನಮ್ಮಿಂದ ಕೊಡುಗೆಗಳೇನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬಡವರಿಗೆ ಹಾಗೂ ದುರ್ಬಲರಿಗೆ ನಿಸ್ವಾರ್ಥ ಮನಸ್ಸಿನಿಂದ ಆರೋಗ್ಯ ಸೇವೆ ನೀಡಿದಾಗ ನಿಜಕ್ಕೂ ನಮ್ಮ ವೃತ್ತಿ ಬದುಕಿಗೆ ಅದು ಸದಾ ಸ್ಫೂರ್ತಿಯಾಗಲಿದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಬದುಕುತ್ತಾನೆ. ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಮುಖಿ ಬದುಕಾಗಲು ಸಾಧ್ಯವಿದೆ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಈ ಕರ್ತವ್ಯವನ್ನು ಸೇವೆ ಎಂದು ಪರಿಗಣಿಸಿ ರೋಟರಿ ಕ್ಲಬ್ ನನ್ನ ಮೇಲೆ ವಿಶೇಷವಾದ ಅಭಿಮಾನವಿಟ್ಟು ಸನ್ಮಾನಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಲಿಯೋ ಪಿಂಟೋ, ರೋಟರಿ ಪ್ರಮುಖರಾದ ಆರ್.ಪಿ. ನಾಯ್ಕ, ಪ್ರಕಾಶ ಶೆಟ್ಟಿ, ಪ್ರಕಾಶ ಕಣ್ವೆಹಳ್ಳಿ, ರಾಹುಲ್ ಬಾವಾಜಿ, ನಾಗೇಶ ನಾಯ್ಕವಾಡಿ, ಡಾ. ಜ್ಞಾನದೀಪ ಗಾಂವಕರ ಉಪಸ್ಥಿತರಿದ್ದು ಡಾ. ಆರ್.ಕೆ. ಕುಲಕರ್ಣಿಯವರ ಆರೋಗ್ಯ, ಸಾಮಾಜಿಕ, ಮತ್ತು ಧಾರ್ಮಿಕ ಸೇವೆಯನ್ನು ವಿಶೇಷವಾಗಿ ಕೊಂಡಾಡಿದರು.