ಸಾರಾಂಶ
ಮಧುಗಿರಿ: ಸಣ್ಣ ಸಮುದಾಯಗಳು ಸಂಘಟಿತರಾಗುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು. ಇಲ್ಲಿನ ಕೆಇಬಿ ನೌಕರರ ಸಂಘದ ಸಮುದಾಯ ಭವನದಲ್ಲಿ ಅಖಿಲ ಭಾರತ ರೊದ್ದಗಾರ್ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರೊದ್ದಗಾರ್ ಸಮಾಜವು 600 ವರ್ಷಗಳ ಇತಿಹಾಸ ಹೊಂದಿದ್ದು, ಇತಿಹಾಸ ಅರಿತವರು ಇತಿಹಾಸವನ್ನು ಸೃಷ್ಟಿಸುತ್ತಾರೆ. ಸಮಾಜದ ಹಿರಿಯರು ನಮ್ಮ ಮಾರ್ಗದರ್ಶಕರಾಗಿದ್ದು, ಅವರ ಸಲಹೆಯನ್ನು ಕಿರಿಯರು ಪಾಲಿಸುತ್ತಾ ಸಮಾಜದಲ್ಲಿ ಸಂಘಟಿತರಾಗಬೇಕು.ಸಮುದಾಯವು ಮುಖ್ಯ ವಾಹಿನಿಗೆ ಬರಬೇಕು ಎಂದರು. ಡಿಸಿಸಿ ಬ್ಯಾಂಕ್ನಿಂದ ಜಿಲ್ಲೆಯ 10 ತಾಲೂಕುಗಳ ರೈತ ಸಮುದಾಯಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದ್ದು , ರೈತರು ಹೆಚ್ಚು ಉಪ ಕಸುಬುಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಮುಂದೆ ಬಂದು ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳಬೇಕು. ರೊದ್ದಗಾರ್ ಸಮುದಾಯ ತಮ್ಮ ಬೇಡಿಕೆಗಳ ಈಡೇರಿಕೆ ಮತ್ತು ತಮ್ಮ ಹಕ್ಕು ಬಾಧ್ಯತೆಗಳನ್ನು ಪಡೆದುಕೊಳ್ಳಲು ಸಂಘಟಿತರಾದಾಗ ಮಾತ್ರ ಮುಂದೆ ಬರಲು ಸಾಧ್ಯ ಎಂದರು. ರೊದ್ದಗಾರ್ ಒಕ್ಕಲಿಗ ಸಮುದಾಯದ ಅಧ್ಯಕ್ಷ ಎನ್.ರಂಗನಾಥಯ್ಯ,ಗೌರವಾಧ್ಯಕ್ಷ ಚಲಿಮಪ್ಪ,ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಅಣ್ಣಯ್ಯ, ಖಜಾಂಚಿ ರಾಮ್ ಕುಮಾರ್, ಮಾಜಿ ರಾಜ್ಯ ಸಭಾ ಸದಸ್ಯ ರಾಜುಗೌಡ,ವಿ.ನಾಗರಾಜು, ರಶ್ಮೀ ರಾಜಣ್ಣ, ಸಮುದಾಯದ ಹಿರಿಯ ವಕೀಲ ನಂಜಾರೆಡ್ಡಿ , ಅಶ್ವತ್ಥಯ್ಯ, ನಾರಾಯಣಪ್ಪ ಸೇರಿ ಸಮಾಜದ ಬಂಧುಗಳಿದ್ದರು.