ಯಕ್ಷಗಾನ ಒಂದು ಜಾನಪದ ಕಲೆ. ಈ ಪ್ರದರ್ಶನದಲ್ಲಿ ಬಳಸುವ ಪದ್ಯ ಹಾಗೂ ಕಥೆಗಳನ್ನು ಪ್ರಸಂಗಗಳೆಂದು ಕರೆಯುತ್ತಾರೆ. ಇದರಲ್ಲಿ ಸಂಸ್ಕೃತ ಕಾವ್ಯ, ರಾಮಾಯಣ ಹಾಗೂ ಮಹಾಭಾರತದ ಸಾಹಿತ್ಯಿಕ ರೂಪಗಳಾಗಿವೆ. ಇದಕ್ಕೆ ತನ್ನದೇ ಆದ ಛಂದಸ್ಸು, ರಾಗ ಹಾಗೂ ವೇಷಭೂಷಣಗಳಿರುತ್ತವೆ.

ಧಾರವಾಡ:

ಯಕ್ಷಗಾನ ಕಲೆಗೆ ಶತಮಾನಗಳ ಇತಿಹಾಸವಿದೆ. ಈ ಕಲೆ ಆಧ್ಯಾತ್ಮಿಕ, ನೈತಿಕ ಹಿನ್ನೆಲೆಗಳದ್ದು. ಯಕ್ಷಗಾನವು ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜೀವಂತ ಕಲೆ ಎಂದು ಆಕಾಶವಾಣಿ ವಿಶ್ರಾಂತ ಅಧಿಕಾರಿ ದಿವಾಕರ್ ಹೆಗಡೆ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಶಂ.ಬಾ. ಜೋಶಿ ದತ್ತಿ ಅಂಗವಾಗಿ ಕನ್ನಡ ಭಾಷಾ ಸಂಶೋಧನಾ ದಿನದ ನಿಮಿತ್ತ ಆಯೋಜಿಸಿದ್ದ ‘ಕನ್ನಡ ಭಾಷಾ ಬೆಳವಣಿಗೆಯಲ್ಲಿ ಯಕ್ಷಗಾನದ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಯಕ್ಷಗಾನ ಒಂದು ಜಾನಪದ ಕಲೆ. ಈ ಪ್ರದರ್ಶನದಲ್ಲಿ ಬಳಸುವ ಪದ್ಯ ಹಾಗೂ ಕಥೆಗಳನ್ನು ಪ್ರಸಂಗಗಳೆಂದು ಕರೆಯುತ್ತಾರೆ. ಇದರಲ್ಲಿ ಸಂಸ್ಕೃತ ಕಾವ್ಯ, ರಾಮಾಯಣ ಹಾಗೂ ಮಹಾಭಾರತದ ಸಾಹಿತ್ಯಿಕ ರೂಪಗಳಾಗಿವೆ. ಇದಕ್ಕೆ ತನ್ನದೇ ಆದ ಛಂದಸ್ಸು, ರಾಗ ಹಾಗೂ ವೇಷಭೂಷಣಗಳಿರುತ್ತವೆ. ಯಕ್ಷಗಾನದಲ್ಲಿ ಅಚ್ಚಕನ್ನಡದ ಶಬ್ದಗಳೇ ಬಳಕೆಯಾಗುತ್ತಿದ್ದು, ಇದರಿಂದ ನಮ್ಮ ಕನ್ನಡ ಸಾಹಿತ್ಯದ ಕಣಜ ಶ್ರೀಮಂತಗೊಳ್ಳಲು ಕಾರಣವಾಗಿದೆ ಎಂದರು.

ದ.ರಾ. ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಮುದ್ದಣ್ಣದಂತಹ ಮೇರು ಕವಿಗಳ ಭಾವಗೀತೆಗಳ ಸಂಯೋಜನೆಯನ್ನಾಧರಿಸಿ ಹಾಡುಗಳ ಬಳಕೆಯು ಇದೆ. ಯಕ್ಷಗಾನ ಪ್ರದರ್ಶನದ ಶೈಲಿ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಿದ್ದು, ಸಾಕ್ಷರತೆ ಹಾಗೂ ಪರಿಸರ ರಕ್ಷಣೆಗೆ ಸಂಬಂಧಿಸಿದ ಪ್ರಸಂಗಗಳೂ ಸೇರ್ಪಡೆಗೊಳಿಸಲಾಗಿದೆ. ಯಕ್ಷಗಾನದ ಹವ್ಯಾಸಿ ಕಲಾವಿದರಲ್ಲಿ ಕೆಲವರು ಅನಕ್ಷರಸ್ಥರಾಗಿದ್ದರೂ ಪ್ರಬುದ್ಧ ಹಾಗೂ ಸಮರ್ಥ ಕಲಾ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆಲ್ಲ ಪರಿಸರದ ಪ್ರಭಾವವೂ ಕಾರಣ. ಯಕ್ಷಗಾನದಲ್ಲಿ ಶಬ್ದ ಸಂಪತ್ತು ಉಳಿಸಿಕೊಂಡು ಬರಲಾಗಿದೆ. ಕನ್ನಡ ಭಾಷಾ ಸಂಸ್ಕೃತಿಯ ಬೆಳವಣಿಗೆಯನ್ನು ಸೇರಿ ಕನ್ನಡವನ್ನು ಎಲ್ಲ ದೃಷ್ಟಿಯಿಂದ ಶ್ರೀಮಂತಗೊಳಿಸಿದ ಅಪರೂಪದ ಕಲೆ ಯಕ್ಷಗಾನವಾಗಿದೆ ಎಂದು ಹೇಳಿದರು.ಮಾನವ ಧರ್ಮ ಪ್ರತಿಷ್ಠಾನದ ಕಾರ್ಯದರ್ಶಿ ವಿ.ಜಿ. ಭಟ್ ಮಾತನಾಡಿ, ಶಂ.ಬಾ. ಜೋಶಿ ಸಮಾನ ಮನಸ್ಕರರ ಸಹಕಾರದಿಂದ ಮಾನವೀಯತೆಯ ನೆಲಗಟ್ಟಿನ ಮೇಲೆ ಮಾನವತೆ ಎಲ್ಲರಲ್ಲೂ ಮೂಡಲಿ ಎಂಬ ದೃಷ್ಟಿಯೊಂದಿಗೆ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಅವರು ಮೂಲ ಮರಾಠಿಯಾದರೂ ಕನ್ನಡ ನೆಲದಲ್ಲಿ ನೆಲೆಯಾಗಿದ್ದರಿಂದ ಕನ್ನಡವನ್ನು ಒಪ್ಪಿ, ಅಪ್ಪಿ ಬೆಳೆಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಯಕ್ಷಗಾನ ಕರಾವಳಿ ಭಾಗದ ಒಂದು ವಿಶಿಷ್ಟ ಕಲೆ. ಅಪರೂಪದ ಕಲೆಯಾದ ಇದರ ಕಲಾವಿದರಲ್ಲಿ ಭಾಷಾ ಪ್ರಭುತ್ವ, ಪ್ರಬುದ್ಧತೆ ಅಗಾಧವಾದುದು. ಇಂದಿನ ಯುವ ಜನಾಂಗ ಈ ಅಪರೂಪದ ಕಲೆ ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.