ಅತಿವೃಷ್ಟಿ ಹಾನಿಗಳಿಗೆ ₹1.42 ಕೋಟಿ ಪರಿಹಾರ ವಿತರಣೆ

| Published : Nov 02 2024, 01:16 AM IST

ಸಾರಾಂಶ

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ, ಆಸ್ತಿ ಮತ್ತು ಜನ-ಜಾನುವಾರುಗಳ ಜೀವಹಾನಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಂತ್ರಸ್ತರು, ರೈತರಿಗೆ ಸರ್ಕಾರದಿಂದ ₹1.42 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕಾಂಗ್ರೆಸ್‌ ಸರ್ಕಾರ ರೈತರು, ಜನರಿಗೆ ಸ್ಪಂದಿಸುತ್ತಿದೆ: ಸಚಿವ ಮಲ್ಲಿಕಾರ್ಜುನ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ, ಆಸ್ತಿ ಮತ್ತು ಜನ-ಜಾನುವಾರುಗಳ ಜೀವಹಾನಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಂತ್ರಸ್ತರು, ರೈತರಿಗೆ ಸರ್ಕಾರದಿಂದ ₹1.42 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಸಾಕಷ್ಟು ಹಾನಿಯಾಗಿದೆ. ಬೆಳೆಹಾನಿ, ಮನೆ, ಕೊಟ್ಟಿಗೆ ಸೇರಿದಂತೆ ಆಸ್ತಿ ಹಾನಿ, ಜನ-ಜಾನುವಾರು ಜೀವಹಾನಿ ಪ್ರಕರಣಗಳಲ್ಲಿ ಸಂತ್ರಸ್ತರಿಗೆ, ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಉಳಿದವರಿಗೂ ಪರಿಹಾರ ನೀಡುವ ಕಾರ್ಯ ನಡೆಯಲಿದ್ದು, ಹಣ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಜಿಲ್ಲೆಗೆ ಭೇಟಿ ನೀಡಿ, ಕೂಲಂಕಷವಾಗಿ ಬೆಳೆಹಾನಿ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳಿಂದಲೂ ಸಮಗ್ರ ಮಾಹಿತಿ ಪಡೆದು, ಶೀಘ್ರವೇ ಪರಿಹಾರ ನೀಡುವ ಬಗ್ಗೆ ಹೇಳಿದ್ದಾರೆ. ಕೃಷಿ ಸಚಿವರು ಮತ್ತು ಮುಖ್ಯಮಂತ್ರಿ ಅವರಿಗೆ ಸಹ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡುವಂತೆ ಮನನವಿ ಮಾಡಿದ್ದೇವೆ. ಶೀಘ್ರವೇ ಸರ್ಕಾರದಿಂದ ಅನುದಾನ ಬಿಡುಗಡೆ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಅತಿವೃಷ್ಟಿಯಿಂದ ಹಾನಿ, ಸಾವು- ನೋವುಗಳ ಬಗ್ಗೆ ಸಿಎಂ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿಗಳ ಸಭೆ ಮಾಡಿ, ಎಲ್ಲ ವಿವರ ಪಡೆದಿದ್ದಾರೆ. ನಾವೂ ಸಹ ಸಿಎಂ ಗಮನಕ್ಕೆ ಮಳೆಯಿಂದಾದ ಹಾನಿ ಕುರಿತ ವೀಡಿಯೋ ತುಣುಕುಗಳನ್ನು ಕಳಿಸಿ, ಅನುದಾನ ಕೋರಿದ್ದೇವೆ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಅವರೇ ಆಯಾ ಜಿಲ್ಲೆಗೆ ಬಂದು, ಮುಖ ತೋರಿಸಿ ಸಭೆ ಮಾಡಬೇಕೆಂದೇನೂ ಇಲ್ಲ. ಬಿಜೆಪಿಯವರಿಗೆ ಸದ್ಯಕ್ಕೆ ಏನೂ ಕೆಲಸ ಇಲ್ಲ. ಇದೇ ಕಾರಣಕ್ಕೆ ಆಡಳಿತ ಪಕ್ಷ ಕಾಂಗ್ರೆಸ್ ಮೇಲೆ ಗೂಬೆ ಕೂಡಿಸಲು ದಾರಿ ಹುಡುಕುತ್ತಿರುತ್ತಾರಷ್ಟೇ. ನಮ್ಮ ಸರ್ಕಾರ ರೈತರು, ಜನರಿಗೆ ಸ್ಪಂದಿಸುತ್ತಿದೆ. ಆದರೆ, ಬಿಜೆಪಿಯವರು ಆಡಳಿತ ಪಕ್ಷದ ಮೇಲೆ ಮಿಥ್ಯಾರೋಪ ಮುಂದುವರಿಸಿದ್ದಾರಷ್ಟೇ ಎಂದು ಎಸ್ಸೆಸ್ಸೆಂ ದೂರಿದರು.

ಈ ಸಂದರ್ಭ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಕೆ.ಎಸ್. ಬಸವಂತಪ್ಪ ಇತರರು ಇದ್ದರು.

- - -

ಟಅಪ್‌ ಕೋಟ್‌

ಕೋವಿಡ್‌ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯವರು ನಡೆಸಿರುವ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲೂ ಸಾಕಷ್ಟು ಭ್ರಷ್ಟಾಚಾರರ ನಡೆದಿದೆ. ಶೀಘ್ರದಲ್ಲೇ ಅದೂ ಹೊರಬೀಳಲಿದೆ. ಕೋವಿಡ್ ವೇಳೆ ರೋಗಿಗಳ ನಕಲಿ ವಿಮೆ ಮಾಡಿಸಿ, ₹2-₹3 ಲಕ್ಷ ಭ್ರಷ್ಟಾಚಾರ ನಡೆಸಿರುವ ವೈದ್ಯರ ಬಗ್ಗೆಯೂ ದಾಖಲೆ ಪಡೆದು, ಸೂಕ್ತ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು

- ಎಸ್‌.ಎಸ್. ಮಲ್ಲಿಕಾರ್ಜುನ, ಸಚಿವ

- - - -ಫೋಟೋ: ಎಸ್.ಎಸ್‌.ಮಲ್ಲಿಕಾರ್ಜುನ