ನಿತ್ಯ ಬಳಕೆಯಿಂದ ಕನ್ನಡ ಭಾಷೆ ಅಭಿವೃದ್ಧಿ ಸಾಧ್ಯ: ಕಿರಣ್‌ ಗೌರಯ್ಯ

| Published : Nov 02 2024, 01:16 AM IST

ಸಾರಾಂಶ

ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ನಡೆಯಿತು. ತಹಸೀಲ್ದಾರ್‌ ಕಿರಣ್ ಜಿ. ಗೌರಯ್ಯ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕನ್ನಡ ಭಾಷೆ ಬಳಕೆ ಮಾಡುವ ಮೂಲಕ ಭಾಷೆಯ ಅಭಿವೃದ್ಧಿ ಸಾಧ್ಯ ಎಂದು ಕುಶಾಲನಗರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ತಹಸೀಲ್ದಾರ್‌ ಕಿರಣ್ ಜಿ. ಗೌರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಕುರಿತು ಮಾತನಾಡಿದ ಅವರು, ಕೇವಲ ಒಂದು ದಿನ ಆಚರಣೆಗೆ ಸೀಮಿತವಾದಲ್ಲಿ ಕನ್ನಡದ ಬೆಳವಣಿಗೆ ಅಸಾಧ್ಯ. ಕನ್ನಡ ನಾಡು ಭಾಷೆ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸುವ ಬಗ್ಗೆ ಸಂಕಲ್ಪ ತೊಡಬೇಕಾಗಿದೆ. ಭಾಷೆಯ ಮೂಲಕ ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದ ಅವರು ಕನ್ನಡಪರ ಚಳುವಳಿಗಾರರ ಹೋರಾಟದ ಫಲವಾಗಿ ಏಕೀಕರಣ ಕರ್ನಾಟಕ ರೂಪುಗೊಂಡಿದೆ. ವಿಶ್ವ ಬೆರಗಾಗುವ ರೀತಿಯಲ್ಲಿ ಕನ್ನಡ ನಾಡು ಅಭಿವೃದ್ಧಿ ಕಂಡಿದೆ ಎಂದು ಹೆಮ್ಮೆವ್ಯಕ್ತಪಡಿಸಿದ ತಹಶೀಲ್ದಾರ್ ಕಿರಣ್ ಗೌರಯ್ಯ , ವೈಜ್ಞಾನಿಕ, ತಾಂತ್ರಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದರು. ಆದರೆ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣ ಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ಕೆ.ಪಿ. ಜಯಕುಮಾರ್ ರಾಷ್ಟ್ರದ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ಕರ್ನಾಟಕ ರಾಜ್ಯದ ಜನತೆ ಹೃದಯ ವೈಶಾಲ್ಯತೆ ಹೊಂದಿದ್ದು, ನಿರಾಶ್ರಿತರಿಗೆ ಆಶ್ರಯ ನೀಡಿದ ನಾಡಾಗಿದೆ. ವಿವಿಧ ಭಾಷೆಗಳ ನಡುವೆ ಸ್ವಾಭಿಮಾನಿ ಕನ್ನಡಿಗರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಕನ್ನಡ ಭಾಷೆ ಬಳಕೆ ಮಾಡುವ ಜನರ ಸಂಖ್ಯೆ ಕ್ಷೀಣ ಗೊಳ್ಳುತ್ತಿದೆ, ಭಾಷೆ ಬಳಕೆ ಮಾಡುವ ಮೂಲಕ ಮಾತ್ರ ಅಭಿವೃದ್ಧಿ ಸಾಧ್ಯ ಎಂದ ಅವರು ವೇದಗಳನ್ನು ಉಪನಿಷತ್ತುಗಳನ್ನು ಓದುವ ಹವ್ಯಾಸಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯರಾದ ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ಪತ್ರಕರ್ತ ಸುನಿಲ್ ಪೊನ್ನೇಟಿ, ಆಟೋ ಚಾಲಕಿ ಸುಜಾತ, ಮಾಧ್ಯಮ ಕ್ಷೇತ್ರದ ವಿ.ವಿ. ಪ್ರಕಾಶ್, ಪೌರಕಾರ್ಮಿಕ ಮಹಾದೇವ್, ವಿದ್ಯಾರ್ಥಿ ಸೂರ್ಯ ತ್ರಿಭುವನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮುನ್ನ ಕುಶಾಲ್ನಗರದ ಪಟ್ಟಣದಲ್ಲಿ ಕನ್ನಡಾಂಬೆ ಮೆರವಣಿಗೆ ನಡೆಯಿತು. ಇದೇ ಸಂದರ್ಭ ನವೆಂಬರ್ 11ರಂದು ಕುಶಾಲನಗರದಲ್ಲಿ ನಡೆಯಲಿರುವ ಕನ್ನಡ ಕಂಠ ಗಾಯನ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.

ಕುಶಾಲನಗರ ವ್ಯಾಪ್ತಿಯ ಶಾಲಾ ಮಕ್ಕಳ ಮೂಲಕ ಆಕರ್ಷಕ ಪಥಸಂಚಲನ ನಡೆಯಿತು. ತಾಲೂಕು ತಹಸಿಲ್ದಾರ್ ಕಿರಣ್ ಗೌರಯ್ಯ ಗೌರವ ವಂದನೆ ಸ್ವೀಕರಿಸಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಕೆ ಎಸ್. ನಾಗೇಶ್, ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ, ತೋಟಗಾರಿಕಾ ಇಲಾಖೆ ಅಧಿಕಾರಿ ವರದರಾಜು, ಮುಖ್ಯ ಶಿಕ್ಷಕಿ ಪುಷ್ಪಾ, ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತಿತರ ಅಧಿಕಾರಿಗಳು ಇದ್ದರು. ನಂತರ ವಿವಿಧ ತಂಡಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.