ಸಾರಾಂಶ
ಬೆಂಗಳೂರು : ಕೇಂದ್ರ ಹಾಗೂ ದಕ್ಷಿಣ ಭಾರತದ ರಾಜ್ಯ ಸರ್ಕಾರಗಳ ನಡುವೆ ತೆರಿಗೆ ಸಂಘರ್ಷ ಏರ್ಪಟ್ಟಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಅಭಿವೃದ್ಧಿಗೆ ಶ್ರಮಿಸಬೇಕು. ಅದಕ್ಕೆ ಅಗತ್ಯ ಅನುದಾನ ನೀಡಲು ಕೇಂದ್ರ ಸಿದ್ಧವಿದೆ ಎನ್ನುವ ಮೂಲಕ ಪರೋಕ್ಷವಾಗಿ ಭಿನ್ನಾಭಿಪ್ರಾಯ ಸಲ್ಲದು ಎಂಬ ಸಂದೇಶ ನೀಡಿದರು.
ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ಭಾನುವಾರ ನಡೆದ ಮೆಟ್ರೋ ಹಂತ-3ರ ಶಂಕುಸ್ಥಾಪನೆ, ಮೆಟ್ರೋ ಹಂತ-2ರ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರವಿರಲಿ, ರಾಜ್ಯ ಸರ್ಕಾರ ಇರಲಿ. ಜನತೆಯ ಶ್ರೇಯಸ್ಸಿಗಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ. ಹೊಸ ಬದಲಾವಣೆಗಳಿಗಾಗಿ ನಾವು ತುಡಿಯಬೇಕು. ಈ ಮೂಲಕ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಿಗೆ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ರೂಪಿಸುವ ಯೋಜನೆಗಳಿಗೂ ನಾವು ಬೆಂಬಲಿಸುತ್ತೇವೆ. ಎರಡು ಕಡೆ ಒಟ್ಟಾಗಿ ಕೆಲಸ ಮಾಡಿ ವಿಕಸಿತ ಭಾರತದ ಸಂಕಲ್ಪ ಸಾಧಿಸಬೇಕಿದೆ ಎಂದರು.
ರಾಜ್ಯಗಳ ಸಹಕಾರ ಅಗತ್ಯ:
ರಾಜ್ಯದ ಪ್ರತಿಭೆಗಳು ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ವಿಷನ್ ಮೇರೆಗೆ ಕಾರ್ಯನಿರ್ವಹಣೆ ಮಾಡುವಂತಿರಬೇಕು. ಅದರಲ್ಲೂ ಕಳೆದೊಂದು ವರ್ಷದಲ್ಲಿ ಸಾಕಷ್ಟು ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ್ದು, ಇಂಥ ಬೆಳವಣಿಗೆಗೆ ರಾಜ್ಯಗಳ ಸಹಕಾರ ಅಗತ್ಯ ಎಂದು ಹೇಳಿದ್ದಾಗಿ ಮೋದಿ ಹೇಳಿದರು.
ಮುಂದುವರಿದು ಕೇಂದ್ರ ಸರ್ಕಾರ ಹಲವು ಕಾಯ್ದೆ-ಕಾನೂನುಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ. ಇದನ್ನು ರಾಜ್ಯ ಸರ್ಕಾರಗಳು ಕೂಡ ಪರಿಗಣಿಸಿ ಅನುಸರಿಸಬಹುದು ಎಂದು ಸಲಹೆ ನೀಡಿದರು.
ಸಣ್ಣ ಸಣ್ಣ ಅಪರಾಧಗಳಿಗೆ ಕ್ಷಮೆ ನೀಡುವ (ನಿರಪರಾಧೀಕರಣ) ಜನವಿಶ್ವಾಸ ಬಿಲ್ ಅನ್ನು ನಾವು ಮಂಡಿಸಿದ್ದೇವೆ. ಶೀಘ್ರ ಜನವಿಶ್ವಾಸ ಬಿಲ್ 2.0 ಕೂಡ ತರುವ ಪ್ರಯತ್ನ ಆಗಲಿದೆ. ರಾಜ್ಯ ಸರ್ಕಾರ ಕೂಡ ಇಂಥ ನಿರಪರಾಧೀಕರಣ ಕಾನೂನು ಗುರುತಿಸಿ ಸುಧಾರಣೆ ಮಾಡಬೇಕು. ಅದೇ ರೀತಿ ಮಿಷನ್ ಕರ್ಮಯೋಗಿ ಯೋಜನೆ ತರಬೇತಿ ಯೋಜನೆಗಳನ್ನು, ಎಕ್ಸ್‌ಪ್ರೆಶನಲ್ ಬ್ಲಾಕ್ ಪ್ರೋಗ್ರಾಂ ರೀತಿಯ ಯೋಜನೆಗಳನ್ನು ರಾಜ್ಯ ಸರ್ಕಾರ ಅಳವಡಿಕೆ ಮಾಡಿಕೊಳ್ಳಬಹುದು. ರಾಜ್ಯ ಸರ್ಕಾರ ರೂಪಿಸುವ ಕಾನೂನು, ಯೋಜನೆಗಳಿಗೆ ಕೇಂದ್ರ ಬೆಂಬಲ ನೀಡಲಿದೆ ಎಂದು ಸ್ಪಷ್ಟವಾಗಿ ತಿಳಿಸಿದರು.