ಸಾರಾಂಶ
ಭಾರತದ್ದು ಅತ್ಯಂತ ವೇಗದ ಆರ್ಥಿಕತೆ. ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿರುವ ಭಾರತ ಶೀಘ್ರ 3ನೇ ಸ್ಥಾನಕ್ಕೇರಲಿದೆ ಎನ್ನುವ ಮೂಲಕ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ್ದು ‘ಡೆಡ್ ಎಕಾನಮಿ’ ಎಂಬ ಟೀಕೆಗೆ ತಿರುಗೇಟು
ಬೆಂಗಳೂರು : ಭಾರತದ್ದು ಅತ್ಯಂತ ವೇಗದ ಆರ್ಥಿಕತೆ. ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿರುವ ಭಾರತ ಶೀಘ್ರ 3ನೇ ಸ್ಥಾನಕ್ಕೇರಲಿದೆ ಎನ್ನುವ ಮೂಲಕ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ್ದು ‘ಡೆಡ್ ಎಕಾನಮಿ’ ಎಂಬ ಟೀಕೆಗೆ ತಿರುಗೇಟು ನೀಡಿದ್ದಾರೆ.
ಭಾನುವಾರ ನಗರದ ಎಲೆಕ್ರ್ಟಾನಿಕ್ಸ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ₹15,611 ಕೋಟಿ ಮೊತ್ತ, 44.65 ಕಿ.ಮೀ ಉದ್ದದ ಮೆಟ್ರೋ ಮೂರನೇ ಹಂತದ ಯೋಜನೆಗೆ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಐಟಿ-ಸಿಟಿ ಬೆಂಗಳೂರಿನಲ್ಲಿ ನಿಂತು ಆಡಿರುವ ಈ ಮಾತು ಇದೀಗ ಹೆಚ್ಚಿನ ಮಹತ್ವ ಪಡೆದಿದೆ.
11 ವರ್ಷದಲ್ಲಿ ಪ್ರಗತಿ:
ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನ್ನಿಸಿಕೊಂಡಿದೆ. ಕಳೆದ 11 ವರ್ಷದಲ್ಲಿ ನಮ್ಮ ಆರ್ಥಿಕತೆ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. ಶೀಘ್ರವೇ ನಾವು ಟಾಪ್ 3 ಆರ್ಥಿಕತೆಯಾಗಲಿದ್ದೇವೆ. ರಿಫಾರ್ಮ್, ಪರ್‌ಫಾರ್ಮ್, ಟ್ರಾನ್ಸ್‌ಫಾರ್ಮ್ ಮನೋಭಾವದ ಸ್ಫೂರ್ತಿಯಿಂದ ಹಾಗೂ ನಿಯತ್ತು, ಪ್ರಾಮಾಣಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು.
ವಿಕಸಿತ ಭಾರತದ ಹಾದಿ ಡಿಜಿಟಲ್ ಇಂಡಿಯಾದ ಗುರಿ ಜೊತೆಗೆ ಸಾಗುತ್ತಿದೆ. ಇಂಡಿಯಾ ಎಐ ಮಿಷನ್ ಮೂಲಕ ಜಾಗತಿಕ ಮಟ್ಟದ ಎಐ ವಲಯದ ನಾಯಕನಾಗಿ ಹೊರಹೊಮ್ಮುತ್ತಿದೆ. ಸೆಮಿಕಂಡಕ್ಟರ್ ಮಿಷನ್ ಕೂಡ ವೇಗ ಪಡೆದಿದ್ದು, ಶೀಘ್ರ ಭಾರತ ‘ಮೇಡ್ ಇನ್ ಇಂಡಿಯಾ’ದ ಚಿಪ್ ಹೊಂದಲಿದೆ. ನಮ್ಮ ಕಡಿಮೆ ವೆಚ್ಚದ ಹೈಟೆಕ್ ಬಾಹ್ಯಾಕಾಶ ಮಿಷನ್ ಇತರರಿಗೆ ಮಾದರಿಯಾಗುತ್ತಿದೆ. ಎಲ್ಲ ಅತ್ಯಾಧುನಿಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಭಾರತವು ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದರು.
11 ವರ್ಷಗಳ ಮೊದಲು ಆಟೋಮೊಬೈಲ್ ರಫ್ತು 16 ಬಿಲಿಯನ್ ಡಾಲರ್ ಇತ್ತು, ಅದೀಗ ದುಪಟ್ಟಾಗಿದೆ. ಭಾರತವು ಆಟೋಮೊಬೈಲ್ ಕ್ಷೇತ್ರದ 4ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಇದರಿಂದ ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಪುಷ್ಟಿ ನೀಡಿದಂತಾಗಿದೆ ಎಂದರು.
2014ಕ್ಕೂ ಮೊದಲು ಭಾರತದ ಒಟ್ಟು ರಫ್ತು ₹468 ಬಿಲಿಯನ್ ಡಾಲರ್ ಇತ್ತು, ಈಗದು ₹824 ಬಿಲಿಯನ್ ಡಾಲರ್ ತಲುಪಿದೆ. ಮೊದಲು ನಾವು ಸ್ಮಾರ್ಟ್‌ಫೋನ್ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನಾವು ರಫ್ತು ಮಾಡುತ್ತಿದ್ದೇವೆ. ಮೊದಲು ನಮ್ಮ ಎಲೆಕ್ಟ್ರಾನಿಕ್ ರಫ್ತು 6 ಬಿಲಿಯನ್ ಡಾಲರ್ ಇತ್ತು, ಈಗದು 38 ಬಿಲಿಯನ್ ಡಾಲರ್ ತಲುಪಿದೆ ಎಂದು ಮೋದಿ ತಿಳಿಸಿದರು.
ಭಾರತದಲ್ಲಿ ಡಿಜಿಟಲೀಕರಣ ಹಳ್ಳಿಹಳ್ಳಿಗೆ ತಲುಪುತ್ತಿದೆ. ಜಾಗತಿಕ ಮಟ್ಟದ ಅರ್ಧಕ್ಕಿಂತ ಹೆಚ್ಚು ಯುಪಿಐ ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ತಂತ್ರಜ್ಞಾನದ ಸಹಕಾರದಿಂದ ನಾವು ಸರ್ಕಾರ ಹಾಗೂ ಸಾಮಾನ್ಯ ನಾಗರಿಕರ ನಡುವಿನ ಅಂತರ ಕಡಿಮೆ ಮಾಡಿದ್ದೇವೆ. ದೇಶದ ಪ್ರಗತಿ ಹಿಂದೆ ನಮ್ಮ ಆರ್ಥಿಕ ಬೆಳವಣಿಗೆ ಪ್ರಮುಖ ಪಾತ್ರ ವಹಿಸಿದೆ ಎಂದರು.