ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು

| N/A | Published : Aug 11 2025, 08:42 AM IST

yellow Metro
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು
Share this Article
  • FB
  • TW
  • Linkdin
  • Email

ಸಾರಾಂಶ

ಸಿಲಿಕಾನ್‌ ಸಿಟಿಯ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (19.15 ಕಿ.ಮೀ.) ಪ್ರಧಾನಿ ಮೋದಿ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.

  ಬೆಂಗಳೂರು :  ಸಿಲಿಕಾನ್‌ ಸಿಟಿಯ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (19.15 ಕಿ.ಮೀ.) ಪ್ರಧಾನಿ ಮೋದಿ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.

ಆರ್‌.ವಿ. ರಸ್ತೆಯ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ರಾಜ್ಯದ ಮೊದಲ ಚಾಲಕರಹಿತವಾಗಿ ಸಂಚರಿಸುವ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿದ ಅವರು ಬಳಿಕ ಅದೇ ರೈಲಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣದವರೆಗೆ ಸಂಚರಿಸಿದರು.

ಬರೋಬ್ಬರಿ ₹7160 ಕೋಟಿ ರು. ಮೊತ್ತದಲ್ಲಿ ನಿರ್ಮಾಣ ಆಗಿರುವ ಹಳದಿ ಮಾರ್ಗ ಸೇರ್ಪಡೆ ಮೂಲಕ ಬೆಂಗಳೂರಿನ ಮೆಟ್ರೋದ ಒಟ್ಟೂ ಉದ್ದ 76.95 ಕಿ.ಮೀ.ನಿಂದ 96 ಕಿ.ಮೀ.ಗೆ ವಿಸ್ತರಣೆ ಆದಂತಾಗಿದೆ. ಒಟ್ಟು ಮೂರು ರೈಲುಗಳ ಮೂಲಕ ಈ ಮಾರ್ಗದ ವಾಣಿಜ್ಯ ಸಂಚಾರ ಆರಂಭ ಆಗಲಿದ್ದು, ಆರಂಭದ ಕೆಲ ತಿಂಗಳು ಪ್ರತಿನಿತ್ಯ 50000 ಹಾಗೂ ಮುಂದೆ 8 ಲಕ್ಷ ಜನ ಸಂಚರಿಸುವ ನಿರೀಕ್ಷೆಯಿದೆ.

ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಅವರು ರಸ್ತೆ ಮಾರ್ಗದ ಮೂಲಕ ಡಬಲ್‌ ಡೆಕ್ಕರ್‌ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸಾಥ್ ನೀಡಿದರು. ಈ ವೇಳೆ ಪ್ರಧಾನಿಯವರು ಹಳದಿ ಮಾರ್ಗದ ಇಂಟರ್‌ಚೇಂಜ್‌ ದೇಶದ ಅತೀ ಎತ್ತರದ ಜಯದೇವ ಮೆಟ್ರೋ ನಿಲ್ದಾಣದ ಮಾದರಿ ವೀಕ್ಷಿಸಿದರು. ಅದರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ ಮೋದಿಯವರಿಗೆ ವಿವರಿಸಿದರು.

ನಿಲ್ದಾಣದಲ್ಲಿ ಅಳವಡಿಸಲಾದ ಡಿಜಿಟಲ್ ಮೆಟ್ರೋ ಟಿಕೆಟ್ ವೆಂಡಿಂಗ್ ಯಂತ್ರದಲ್ಲಿ ಬಿತ್ತರವಾಗುವ ಕ್ಯುಆರ್ ಕೋಡ್ ಅನ್ನು ಖುದ್ದು ಸ್ಕ್ಯಾನ್‌ ಮಾಡುವ ಮೂಲಕ ಮೋದಿ ಟಿಕೆಟ್ ಖರೀದಿಸಿದರು. ಪಡೆದ ಟಿಕೆಟನ್ನು ಮೆಟ್ರೋ ಬ್ಯಾರಿಕೆಡ್‌ನಲ್ಲಿ ಸ್ಕ್ಯಾನ್ ಮಾಡಿ ನಿಲ್ದಾಣದ ಒಳಪ್ರವೇಶಿಸಿ ಪ್ಲಾಟ್‌ಫಾರ್ಮ್‌ಗೆ ಹೋದರು.

ಅಲ್ಲಿ ಬೆಂಗಳೂರಿನ ಚಾಲಕರಹಿತ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿದರು. ಮೋದಿಯವರಿದ್ದ ಮೆಟ್ರೋ ರೈಲನ್ನು ಮಹಿಳಾ ಲೊಕೋಪೈಲಟ್ ವಿನೂತಾ ಅವರು ಚಾಲನೆ ಮಾಡಿದರು. ರೈಲಿನೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಮೋದಿಯವರ ಅಕ್ಕಪಕ್ಕ ಕೂತಿದ್ದರು.

ಜತೆಗೆ ರಾಜ್ಯಪಾಲ ಥಾವರ್ ಚಂದ ಗೆಹಲೋತ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್‌ ಕಟ್ಟರ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಕುಳಿತಿದ್ದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಇದ್ದರು.

ವಿದ್ಯಾರ್ಥಿಗಳು ಕಾರ್ಮಿಕರ ಜತೆ ಮಾತುಕತೆ

ಇದಕ್ಕೂ ಮುನ್ನ ಮೊದಲ ಕೋಚ್ ನಲ್ಲಿ ಮೋದಿ ಅವರ ಜೊತೆಗೆ ಮೆಟ್ರೋ ಹಳದಿ ನಿರ್ಮಾಣದಲ್ಲಿ ಶ್ರಮಿಸಿದ 8 ಉದ್ಯೋಗಿಗಳು ಸೇರಿ, 16 ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ 8 ನಾಗರಿಕರು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ರೈಲು ನಿಲ್ದಾಣದವರೆಗೆ ಸಂಚಾರ ನಡೆಸಿದರು. ಎಲ್ಲರ ಜತೆಗೆ ಈವೇಳೆ ಮೋದಿ ಕೆಲಕಾಲ ನಸುನಗುತ್ತ ಮಾತುಕತೆ ನಡೆಸಿದರು.

ಮೆಟ್ರೋ ಮಾರ್ಗ: ಬೆಂಗಳೂರು ನಂ.2

- ನಗರದಲ್ಲೀಗ 96 ಕಿ.ಮೀ. ಮೆಟ್ರೋ ಜಾಲ

ಬೆಂಗಳೂರು:  ದೆಹಲಿ ಬಳಿಕ ಬೆಂಗಳೂರು ಶೀಘ್ರ ಅತೀ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರವಾಗಿ ಬೆಳೆಯುತ್ತಿದ್ದು, ಇಲ್ಲಿನ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್‌ ಖಟ್ಟರ್ ತಿಳಿಸಿದ್ದಾರೆ.

ಐಐಐಟಿ ಸಭಾಂಗಣದಲ್ಲಿ ಭಾನುವಾರ ನಡೆದ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಮೆಟ್ರೋ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು. ಹಳದಿ ಮೆಟ್ರೋ ಮಾರ್ಗದಿಂದಾಗಿ ಬೆಂಗಳೂರಿನ ಒಟ್ಟಾರೆ ಮೆಟ್ರೋ ಮಾರ್ಗದ ಉದ್ದ 76.95 ಕಿ.ಮೀ.ನಿಂದ 96 ಕಿ.ಮೀ.ಗೆ ವಿಸ್ತರಣೆ ಆದಂತಾಗಿದೆ.

ಪ್ರತಿ 25 ನಿಮಿಷಕ್ಕೆ 1 ರೈಲು ಸಂಚಾರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ ಆರ್‌.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ - ಬೊಮ್ಮಸಂದ್ರ ನಡುವಿನ ಮೆಟ್ರೋ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಸೋಮವಾರದಿಂದ ಆರಂಭವಾಗಲಿದೆ. ಮೊದಲ ರೈಲು ಬೆಳಗ್ಗೆ 6.30ಕ್ಕೆ ಹೊರಡಲಿದೆ. ಮೂರು ರೈಲುಗಳು ಮಾತ್ರ ಲಭ್ಯ ಇರುವುದರಿಂದ 25 ನಿಮಿಷಗಳ ಅಂತರದಲ್ಲಿ ಇವು ಸಂಚರಿಸಲಿದ್ದು, ಪ್ರಯಾಣಿಕರು ಅಷ್ಟು ಹೊತ್ತು ಕಾಯುವುದು ಕೆಲ ತಿಂಗಳು ಅನಿವಾರ್ಯ. ಸೋಮವಾರದಿಂದ ಶನಿವಾರದವರೆಗೆ ಈ ಮಾರ್ಗದಲ್ಲಿ ಆರ್.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 6.30 ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಈ ಮಾರ್ಗದ ಪ್ರಯಾಣಕ್ಕೆ ಸುಮಾರು 35 ನಿಮಿಷಗಳಾಗಿರುತ್ತದೆ (ಒಂದು ದಿಕ್ಕಿನಲ್ಲಿ). ಒಟ್ಟು 16 ನಿಲ್ದಾಣಗಳಿವೆ.

Read more Articles on