ಮೆಟ್ರೋ ಯೋಜನೆ ಕೇವಲ ಕೇಂದ್ರ ಸರ್ಕಾರದ್ದಲ್ಲ ರಾಜ್ಯದ ಪಾಲುದಾರಿಕೆಯೂ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್

| Published : Aug 06 2025, 01:15 AM IST

ಮೆಟ್ರೋ ಯೋಜನೆ ಕೇವಲ ಕೇಂದ್ರ ಸರ್ಕಾರದ್ದಲ್ಲ ರಾಜ್ಯದ ಪಾಲುದಾರಿಕೆಯೂ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋ ಯೋಜನೆಯು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆಯ ಯೋಜನೆಯಾಗಿದ್ದು, ಇದರಲ್ಲಿ ಜನರ ಸೇವೆ ಮುಖ್ಯವೇ ಹೊರತು, ಕ್ರೆಡಿಟ್ ರಾಜಕಾರಣವಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಯೋಜನೆಯು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆಯ ಯೋಜನೆಯಾಗಿದ್ದು, ಇದರಲ್ಲಿ ಜನರ ಸೇವೆ ಮುಖ್ಯವೇ ಹೊರತು, ಕ್ರೆಡಿಟ್ ರಾಜಕಾರಣವಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಆಗಸ್ಟ್ 10ಕ್ಕೆ ಉದ್ಘಾಟನೆಯಾಗಲಿರುವ ಮೆಟ್ರೋ ‌ಹಳದಿ ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರವರೆಗೆ ಮೆಟ್ರೋದಲ್ಲಿ ಮಂಗಳವಾರ ಸಂಚರಿಸಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರದ ಮನವಿ ಮೇರೆಗೆ ಪ್ರಧಾನ ಮಂತ್ರಿ ಅವರು, ಉದ್ಘಾಟನೆಗೆ ದಿನಾಂಕ ನೀಡಿದ್ದಾರೆ. ಇದು ಕೇವಲ ಕೇಂದ್ರ‌ ಸರ್ಕಾರದ ಯೋಜನೆಯಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಶೇ.50 ರಷ್ಟು ಪಾಲುದಾರಿಕೆಯ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಕಡೆಯಿಂದ ಅಧ್ಯಕ್ಷರಿದ್ದರೆ, ರಾಜ್ಯ ಸರ್ಕಾರದ ಕಡೆಯಿಂದ ವ್ಯವಸ್ಥಾಪಕ ನಿರ್ದೇಶಕರಿರುತ್ತಾರೆ. ಇಲ್ಲಿ ಯಾರಿಗೂ ಕಿವಿ ಮೇಲೆ ಹೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಜನರ ಸೇವೆ ಮಾಡುತ್ತಿದ್ದು, ನಮ್ಮ‌ ಜವಾಬ್ದಾರಿ ನಿರ್ವಹಣೆ ಮಾಡಿದ್ದೇವೆ ಎಂದು ಹೇಳಿದರು.

ಐಐಎಂಬಿ ಪ್ರಧಾನಿ ಕಾರ್ಯಕ್ರಮ

19.16 ಕಿ.ಮೀ ಉದ್ದ ಹಳದಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 7,610 ಕೋಟಿ ರು. ವೆಚ್ಚ ಮಾಡಲಾಗಿದೆ. ಒಟ್ಟು 16 ನಿಲ್ದಾಣಗಳಿರುವ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೋದಿ ಆ.10 ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಆ.10ರಂದು ಐಐಎಂಬಿಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೆಟ್ರೋ ರೈಲಿನಲ್ಲಿ ಪ್ರಧಾನಿ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಸ್ಥಳೀಯ ಶಾಸಕ ಉದ್ಘಾಟನೆ ಬಳಿಕ ಪ್ರಯಾಣ ಮಾಡಲಿದ್ದಾರೆ. ಇದೇ ವೇಳೆ ಡಬಲ್‌ ಡೆಕ್ಕರ್ ಯೋಜನೆಯ ಭೂಸ್ವಾಧೀನಕ್ಕೆ ಅನುದಾನದ ಕೊರತೆ ಇದ್ದು, ಈ ಬಗ್ಗೆ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಸದರು ಅನುದಾನ ಕೊಡಿಸಲಿ:

ಹೊಸ ಮೆಟ್ರೋ ಮಾರ್ಗ ನಿರ್ಮಾಣದ ಮೇಲೆ ಡಬ್ಬಲ್‌ ಡೆಕ್ಕರ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ಭೂಸ್ವಾಧೀನ ಪಡಿಸಿಕೊಂಡರೆ ಕಟ್ಟಡ ಮತ್ತು ಭೂ ಮಾಲೀಕರಿಗೆ ಪರಿಹಾರ ನೀಡಬೇಕಾಗಲಿದೆ. ಸಂಸದರು ಬರೀ ತಪ್ಪು ಕಂಡುಹಿಡಿದು ಮಾತನಾಡುತ್ತಾರೆ. ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸಿದರೆ ಬೆಂಗಳೂರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಒಬ್ಬರೂ ಮಾತನಾಡುವುದಿಲ್ಲ ಎಂದು ಸಂಸದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಮೆಟ್ರೋ ರೈಲ್ವೇ ಆಯುಕ್ತಾಯಲ ಹಳದಿ ಮೆಟ್ರೋ ಕಾರ್ಯಾಚರಣೆಗೆ ಜು.31ಕ್ಕೆ ಸುರಕ್ಷತಾ ಪ್ರಮಾಣ ಪತ್ರ ನೀಡಿದೆ. ಸಂಸದ ತೇಜಸ್ವಿ ಸೂರ್ಯ ಆತುರದಲ್ಲಿರುವ ಹುಡುಗ, ಅನುಭವವಿಲ್ಲ ಎಂದರು.

ಬೆಂಗಳೂರಿನಲ್ಲಿ ಉತ್ತಮ ವಾತಾವರಣ ಇರುವುದರಿಂದ ದೇಶದ ವಿವಿಧ ಭಾಗದಿಂದ ಜನರು ಆಗಮಿಸುತ್ತಾರೆ. ಮೆಟ್ರೋ ನಿಲ್ದಾಣ ಇರುವ ಕಡೆ ಹೆಚ್ಚುವರಿ 3 ರಿಂದ 4 ಎಕರೆ ಜಮೀನು ಪಡೆದು ವಾಹನ ನಿಲ್ದಾಣ ನಿರ್ಮಿಸಿ ಮೇಲೆ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಸೂಚಿಸಲಾಗಿದೆ ಎಂದರು.

ಮೆಟ್ರೋ ಹಳದಿ ಮಾರ್ಗವನ್ನು ಆರ್ ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಮಂಗಳವಾರ ಪರಿಶೀಲನೆ ನಡೆಸಿದ ಸಂದರ್ಭ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು. ಬಿಡಿಎ ಅಧ್ಯಕ್ಷ ಹ್ಯಾರೀಸ್, ಶಾಸಕರಾದ ಕೃಷ್ಣಪ್ಪ, ಸಿ ಕೆ ರಾಮಮೂರ್ತಿ, ಸತೀಶ್ ರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿಎಂಆರ್‌ಸಿಎಲ್‌ ವ್ಯವಸ್ಥಾಪಜ ನಿರ್ದೇಶಕ ರವಿಶಂಕರ್, ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಮೊದಲಾದವರಿದ್ದರು.

ಸದ್ಯ 25 ನಿಮಿಷಕ್ಕೊಂದು ರೈಲು: ಹಳದಿ ಮಾರ್ಗದಲ್ಲಿ ಈಗಾಗಲೇ 3 ರೈಲು ಕಾರ್ಯಾಚರಣೆ ಮಾಡುತ್ತಿವೆ. 4ನೇ ರೈಲು ಇದೇ ತಿಂಗಳು ಬರಲಿದೆ. ಕಾರ್ಯಾಚರಣೆ ನಡೆಸಲು ಒಂದು ವಾರ ಬೇಕಾಗಲಿದೆ. ಮೆಟ್ರೋ ರೈಲು ಕಡಿಮೆ ಇರುವ ಕಾರಣಕ್ಕೆ 25 ನಿಮಿಷಕ್ಕೊಂದು ಕಾರ್ಯಾಚರಣೆ ಮಾಡಲಿವೆ. ರೈಲುಗಳು ಬಂದಂತೆ ಹಂತ ಹಂತವಾಗಿ 10 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು.ಕಾರಣಾಂತರಗಳಿಂದ ರೈಲುಗಳು ಬಂದಿಲ್ಲ. ಚೀನಾದಿಂದ ಒಂದಷ್ಟು ರೈಲುಗಳನ್ನು ತೆಗೆದುಕೊಂಡಿದ್ದರು. ಆದರೆ, ಅದರಲ್ಲಿ ಒಂದಷ್ಟು ತೊಡಕುಗಳಿವೆ. ಈಗ ಇಟಾನಗರ ಸೇರಿದಂತೆ ಇತರೆಡೆಯಿಂದ ರೈಲುಗಳು ಬರಬೇಕು. ಅಲ್ಲಿಂದ‌‌ ಬಂದ ನಂತರ ರೈಲು ಸಂಚಾರ ಕಾರ್ಯಾಚರಣೆ ಹೆಚ್ಚಳ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಟನಲ್‌ ರಸ್ತೆ ಟೆಂಡರ್‌ನಲ್ಲಿ ಅದಾನಿ ಕಂಪನಿ:ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುಮಾರು 18 ಕಿ.ಮೀ ಟನಲ್‌ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಹ್ವಾನಿಸಿರುವ ಟೆಂಡರ್‌ನಲ್ಲಿ ಅದಾನಿ ಕಂಪನಿ ಭಾಗವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಅದಾನಿ ಕಂಪನಿಯೊಂದಿಗೆ ನೀವು ಭಾಗವಹಿಸಬಹುದು ಎಂದು ಹೇಳಿದರು.ಇನ್ನೂ ನಗರದ ರಸ್ತೆಗಳ ಡಾಂಬರೀಕರಣಕ್ಕೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.