ಟ್ರಾಫಿಕ್ ಜಾಮ್‌ಗೆ ಮೆಟ್ರೋ ಪರಿಹಾರ : ಸಂಸದ ತೇಜಸ್ವಿ ಸೂರ್ಯ

| N/A | Published : Aug 09 2025, 12:00 AM IST / Updated: Aug 09 2025, 07:37 AM IST

ಟ್ರಾಫಿಕ್ ಜಾಮ್‌ಗೆ ಮೆಟ್ರೋ ಪರಿಹಾರ : ಸಂಸದ ತೇಜಸ್ವಿ ಸೂರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಪ್ರಮುಖರು. ಮೆಟ್ರೋ ಹಳದಿ ಮಾರ್ಗ ಯೋಜನೆ ಬಗ್ಗೆ   ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

ಮಯೂರ್ ಹೆಗಡೆ

 ಬೆಂಗಳೂರು

ರಾಜಧಾನಿಯ ಬಹು ನಿರೀಕ್ಷಿತ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವಿನ 19.15 ಕಿಮೀ) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನಾರ್ಪಣೆ ಮಾಡುತ್ತಿದ್ದಾರೆ. ನಮ್ಮ ಮೆಟ್ರೋ ಯೋಜನೆ ಕುರಿತಂತೆ ತುಸು ಹೆಚ್ಚು ಆಸಕ್ತಿ ಹೊಂದಿರುವ, ಈ ಬಗ್ಗೆ ಸಂಸತ್ತಿನಲ್ಲಿ ಅಥವಾ ಸಾರ್ವಜನಿಕವಾಗಿ ಚರ್ಚಿಸುವವರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಪ್ರಮುಖರು. ಈ ಯೋಜನೆ ಬಗ್ಗೆ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

ಕೊನೆಗೂ ಮೆಟ್ರೋ ಹಳದಿ ಮಾರ್ಗದ ಪ್ರಯಾಣದ ಕನಸು ಸಾಧ್ಯವಾಗುತ್ತಿದೆ. ಇದರಿಂದ ಟ್ರಾಫಿಕ್‌ ಕಡಿಮೆ ಆಗಲಿದೆ ಎನ್ನಿಸುತ್ತಿದೆಯೆ?

-ಹೌದು. ಅಂತೂ ಹಳದಿ ಮೆಟ್ರೋ ಮಾರ್ಗ ಉದ್ಘಾಟನೆ ಆಗುತ್ತಿದೆಯಲ್ಲ ಎಂಬ ಖುಷಿ, ನಿರಾಳತೆ ಜನರಲ್ಲಿದೆ. ಕೋವಿಡ್‌ನಿಂದ ಯೋಜನೆ ವಿಳಂಬವಾದ ಅವಧಿ ಹೊರತುಪಡಿಸಿದರೂ 2 ವರ್ಷ ಮೊದಲೆ ಇದು ಮುಗಿಯಬೇಕಿತ್ತು. ಈ ಮಾರ್ಗ ಬೆಂಗಳೂರಿನ ಹೃದಯ ಭಾಗವನ್ನು ಎಲೆಕ್ಟ್ರಾನಿಕ್‌ ಸಿಟಿ ಜತೆ ಸಂಪರ್ಕಿಸುತ್ತದೆ. ಪ್ರತಿನಿತ್ಯ ಅಲ್ಲಿಗೆ ಹೊಗೋಕೆ ಎರಡು ತಾಸು ಬೇಕು. ಮೆಟ್ರೋದಿಂದ ಖಂಡಿತವಾಗಿ ಟ್ರಾಫಿಕ್‌ ಕಿರಿಕಿರಿಗೆ ಪರಿಹಾರ ಸಿಗಲಿದೆ. ಅಂದು ಮೆಟ್ರೋ ಮೂರನೇ ಹಂತಕ್ಕೂ ಪ್ರಧಾನಿಯವರು ಶಂಕು ಸ್ಥಾಪನೆ ಮಾಡುತ್ತಿದ್ದಾರೆ. ₹15ಸಾವಿರ ಕೋಟಿ ಯೋಜನೆ ಇದು. 10ಲಕ್ಷ ಜನರಿಗೆ ಅನುಕೂಲ ಆಗಲಿದೆ. ಇವೆರಡು ಯೋಜನೆಗಳಿಂದ ಬೆಂಗಳೂರು ದಕ್ಷಿಣದ 18ಲಕ್ಷ ಜನಕ್ಕೆ ಅನುಕೂಲ ಆಗಲಿದೆ.

ಈ ಯೋಜನೆ ಗಜಪ್ರಸವ ಎನ್ನಿಸಿಕೊಳ್ಳುವ ಮಟ್ಟಿಗೆ ವಿಳಂಬವಾಗಿದೆ, ಅಂತಹ ಪರಿಸ್ಥಿತಿಗೆ ಯಾಕೆ ಉಂಟಾಯಿತು?

-ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ. ಯೋಜನೆ ಅನುಷ್ಠಾನದ ಹೊಣೆ ಹೊತ್ತ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಒಬ್ಬ ಪೂರ್ಣಾವಧಿ ಎಂಡಿ ನೇಮಕ ಮಾಡದೆ ಇತರೆ ಹೊಣೆ ಕೊಟ್ಟು ಪಾರ್ಟ್‌ಟೈಂ ರೀತಿ ನೇಮಿಸಿದ್ದು ಇವರೇ ತಾನೆ. ಯೋಜನೆ ನಿರ್ವಹಿಸೋಕೆ ಎರಡೂವರೆ ವರ್ಷ ಸಾರಥಿಯೇ ಇಲ್ಲದಂತೆ ಮಾಡಿದ್ದರು. ಒಂದೂವರೆ ವರ್ಷ ಭೂಸ್ವಾಧೀನ ಸಮಸ್ಯೆ ಕಾನೂನು ತೊಡಕಾದಾಗ ಕೇಳುವವರೇ ಇರಲಿಲ್ಲ. 15 - 20 ಸಾವಿರ ಕೋಟಿ ಮೌಲ್ಯದ ಯೋಜನೆಯನ್ನು ನಿರ್ವಹಿಸುವ ರೀತಿ ಹೀಗಾ? ಇವರಿಗೆ ಯೋಜನೆಯನ್ನ ಬೇಗ ಮುಗಿಸುವ ಇರಾದೆಯೇ ಇರಲಿಲ್ಲ.

ಯೋಜನೆ ವೇಗಕ್ಕೆ ನಿಮ್ಮ ಕೊಡುಗೆ ಏನು?

-ದೀರ್ಘವಾಗೇ ಉತ್ತರಿಸುತ್ತೇನೆ, ಮೂರು ತಿಂಗಳ ಕಾಲ ಈ ಯೋಜನೆ ಫಾಲೋಅಪ್‌ ಮಾಡಿದ್ದೇನೆ. 2022ರ ಅಂತ್ಯಕ್ಕೆ ಯೋಜನೆಯ ರೀವಿವ್ಯೂ ಮಾಡಿದಾಗ ಸಾಲು ಸಾಲು ಸಮಸ್ಯೆಗಳಿದ್ದವು. ಮೊದಲನೆದಾಗಿ ಮೆಟ್ರೋ ನಿಗಮಕ್ಕೆ ಪೂರ್ಣಾವಧಿ ಎಂಡಿ ನೇಮಕ ಆಗೋವರೆಗೂ ಗುದ್ದಾಡಬೇಕಾಯಿತು. ಕೇಂದ್ರದಲ್ಲಿ ಹರ್ದೀಪ್‌ ಸಿಂಗ್‌ ಪುರಿ ಸಂಪರ್ಕಿಸಿ, ಇಲ್ಲಿ ಸಿಎಂ, ಡಿಸಿಎಂಗೆ ಹತ್ತಾರು ಮನವಿ ಕೊಟ್ಟಿದಿವಿ. ಇನ್ನು ಸ್ವಲ್ಪ ಹಿಂದಕ್ಕೆ ಹೋಗುವುದಾದರೆ, ಗಲ್ವಾನ್‌ ಸಂಘರ್ಷದ ಬಳಿಕ ಚೀನಾದ ಸಿಆರ್‌ಆರ್‌ಸಿ ಕಂಪನಿಯಿಂದ ಎಲ್ಲ ರೈಲು ತರಿಸಿಕೊಳ್ಳುವ ಬದಲು ಮೇಕ್‌ ಇನ್‌ ಇಂಡಿಯಾದಡಿ ಕೊಲ್ಕತ್ತಾದ ತೀತಾಘಡ್‌ ರೈಲ್ ಸಿಸ್ಟಂ ನಲ್ಲಿ ರೈಲು ನಿರ್ಮಿಸಲು ತೀರ್ಮಾನ ಆಗಿತ್ತು. ಚೀನಾ ಸಿಆರ್‌ಆರ್‌ಸಿ ಎಂಜಿನಿಯರ್‌ಗಳು ಭಾರತಕ್ಕೆ ಬಂದು ರೈಲು ನಿರ್ಮಾಣದಲ್ಲಿ ಸಹಕರಿಸಲು ವೀಸಾ ಸಮಸ್ಯೆ ಆಗಿತ್ತು. ಶಾಂಘೈನ ಭಾರತೀಯ ರಾಯಭಾರಿ ಕಚೇರಿ, ಇಲ್ಲಿ ಅಮಿತ್‌ ಶಾ, ಜೈಶಂಕರ್‌ ಅವರನ್ನ ಹತ್ತಾರು ಬಾರಿ ಭೇಟಿಯಾಗಿ ವೀಸಾ ಸಮಸ್ಯೆ ಪರಿಹರಿಸಿದ್ದೇವೆ.

ಇಷ್ಟಕ್ಕೆ ಮುಗಿದಿಲ್ಲ. ತೀತಾಘಡ್‌ ಕಂಪನಿಯಲ್ಲಿ ನಾಗಪುರ, ಅಹ್ಮದಾಬಾದ್‌ ಬಳಿಕ ಬೆಂಗಳೂರಿನ ಮೆಟ್ರೋ ನಿರ್ಮಿಸೋಕೆ ತೀರ್ಮಾನ ಆಗಿತ್ತು. ಹಾಗೇನಾದರೂ ಆಗಿದ್ದರೆ 2025ರ ಅಂತ್ಯಕ್ಕೆ ರೈಲುಗಳು ಬರುವ ಸಾಧ್ಯತೆ ಇತ್ತು. ಆಗ ನಾನೇ ಅಲ್ಲಿ ಒತ್ತಡ ತಂದು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ರೈಲು ನಿರ್ಮಿಸಲು ಪ್ರತ್ಯೇಕ ಅಸೆಂಬಲ್‌ ಲೈನ್‌ ಮಾಡಿಸಿದ್ದೆ. ಇದು ಆಗುವ ವೇಳೆಗೆ ಮೆಟ್ರೋ ಸಿಗ್ನಲ್‌ ಸಿಸ್ಟಂ (ಟಿಸಿಎಂಎಸ್‌) ಪೂರೈಸಬೇಕಿದ್ದ ಕಂಪನಿ ತೀತಾಘರ್‌ ಬದಲು ಚೀನಾದ ಸಿಆರ್‌ಆರ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅದನ್ನ ತೀತಾಘಡ್‌ ಕಂಪನಿ ಜೊತೆ ಸಂಯೋಜನೆ ಆಗುವಂತೆ ಪ್ರಯತ್ನ ಮಾಡಿದ್ದು ನಾನು. ಎಲ್ಲ ಮುಗಿದು ಸಿಎಂಆರ್‌ಎಸ್ ತಪಾಸಣೆಯನ್ನು ವಿಳಂಬ ಇಲ್ಲದಂತೆ ನಾವು ಕೇಂದ್ರದ ಮೂಲಕ ಮುಗಿಸಿಕೊಟ್ಟಿದ್ದೇವೆ.

ಉದ್ಘಾಟನೆ ಹೊತ್ತಲ್ಲಿ ಬ್ಲೇಮ್‌ ಗೇಮ್‌, ಕ್ರೆಡಿಟ್‌ ವಾರ್‌ ಯಾಕೆ?

-ದೂಷಿಸೋಕೆ ಮೆಟ್ರೋ ಯೋಜನೆ ಕೆಲಸದಲ್ಲಿ ಕೇಂದ್ರದ ಪಾಲು ಎಷ್ಟಿದೆ ಹೇಳಿ? ಅಲೈನ್‌ಮೆಂಟ್‌, ಫಿಸಿಬಲಿಟಿ, ಡಿಪಿಆರ್‌ ಮಾಡೋದು ರಾಜ್ಯ ಸರ್ಕಾರದ ಕೆಲಸ. ತಾಂತ್ರಿಕ ಸಾಧ್ಯಾಸಾಧ್ಯತೆ ಪರಿಶೀಲಿಸಿ ಯೋಜನೆಗೆ ಒಪ್ಪಿಗೆ ನೀಡುವುದು, ಅಂತಾರಾಷ್ಟ್ರೀಯ ಸಾಲ ಕೊಡಿಸುವುದು, ಯೋಜನೆ ಮುಗಿದ ಬಳಿಕ ಸಿಎಂಆರ್‌ಎಸ್‌ ಆಡಿಟ್‌ ನಡೆಸಿ ಜನಸಂಚಾರಕ್ಕೆ ಒಪ್ಪಿಗೆ, ಇವೆಲ್ಲ ಕೇಂದ್ರದ ಕೆಲಸ. ಎಂಡಿ ನೇಮಕ, ಭೂಸ್ವಾಧೀನ ಸಮಸ್ಯೆ ನಿವಾರಣೆ. ನಿಗದಿತ ಅವಧಿಗೆ ರೈಲಿನ ಪೂರೈಕೆ ಸೇರಿ ಇತರೆ ಸಮಸ್ಯೆ ಪರಿಹರಿಸಬೇಕಿರುವುದು ರಾಜ್ಯ ಸರ್ಕಾರದ ಹೊಣೆ. ಈಗ ಹೇಳಿ, ಯಾರನ್ನ ದೂರಬೇಕು? ಹಳದಿ ಮೆಟ್ರೋ ವಿಳಂಬದಿಂದ ಪ್ರತಿ ಕಿಮೀಗೆ ₹400 ಕೋಟಿ ಹೆಚ್ಚುವರಿ ಖರ್ಚಾಗಿದೆ. ಇದಕ್ಕೆ ಯಾರು ಹೊಣೆ?

ಕೇಂದ್ರಕ್ಕೆ ಮಾತ್ರ ಬದ್ಧತೆ, ರಾಜ್ಯಕ್ಕಿಲ್ಲ ಅಂತೀರಾ?

-ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಬಗೆಹರಿಯಲಿ ಎಂಬ ಕಾಳಜಿ ಇದೆಯಲ್ಲ, ಅದರ ನಯಾಪೈಸೆಯಷ್ಟೂ ಬದ್ಧತೆ ಈಗಿನ ರಾಜ್ಯ ಸರ್ಕಾರಕ್ಕೆ ಇದ್ದಂತಿಲ್ಲ. ಆ.1ರಂದು ಮೋದಿ ಅವರನ್ನು ಉದ್ಘಾಟನೆಗೆ ಕೋರಿ ಭೇಟಿಯಾದಾಗ ‘ತಕ್ಷಣ ಬೆಂಗಳೂರಿಗೆ ಟ್ರಾಫಿಕ್‌ ದೊಡ್ಡ ಸಮಸ್ಯೆ, ಒಂದು ದಿನ ವಿಳಂಬವಾದರೂ ಜನ ಸಮಸ್ಯೆ ಅನುಭವಿಸ್ತಾರೆ. ಶೀಘ್ರ ಲೋಕಾರ್ಪಣೆ ಮಾಡೋಣ ಎಂದರು. ಎರಡು ಗಂಟೆಯಲ್ಲಿ ಸಚಿವ ಮನೋಹರ್‌ಲಾಲ್‌ ಖಟ್ಟರ್‌ ಕಚೇರಿಯಿಂದ ಆ.10ರಂದು ಪ್ರಧಾನಿಯವರಿಂದ ಉದ್ಘಾಟನೆಯ ಸಮಯ ಕೊಟ್ಟರು. ಇದು ಅವರ ಜವಾಬ್ದಾರಿ ತೋರುತ್ತದೆ. 

ಮುಂದಿನ ವರ್ಷಾಂತ್ಯಕ್ಕೆ ಕಾಳೇನ ಅಗ್ರಹಾರ - ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗ ಮುಗಿಸುತ್ತೇವೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ? ಹಳದಿ ಮಾರ್ಗದ ಹಾದಿಯಲ್ಲೆ ಇದು ಸಾಗಿದರೆ ಹೇಗೆ?

-ರಾಜ್ಯ ಸರ್ಕಾರ, ಬಿಎಂಆರ್‌ಸಿಎಲ್‌ನ್ನು ಬಿಟ್ಟರೆ ಇದು ಸಾಧ್ಯವಿಲ್ಲ. ಮುಂದೆ ಗುಲಾಬಿ ಮಾರ್ಗ ಶೀಘ್ರ ಜನಾರ್ಪಣೆ ಆಗುವಂತೆ ಮಾಡುವುದು ನಮ್ಮ ಗುರಿ. ಬೆಮೆಲ್‌ನಿಂದ ರೈಲು ಬೇಗ ಸಿಗುವಂತೆ ಪ್ರಯತ್ನ ಮಾಡುತ್ತೇವೆ. ಹೀಗೆ ಹೋದರೆ, ಈಜಿಪುರ ಸೇತುವೆ ನಿರ್ಮಿಸುತ್ತಿರುವ ಬಿಬಿಎಂಪಿಗೆ ಏನಾದರೂ ಮೆಟ್ರೋದ ಹೊಣೆ ನೀಡಿದರೆ 2030ಕ್ಕೆ 300 ಕಿಮೀ ಮೆಟ್ರೋ ವಿಸ್ತರಿಸುವುದು ಕನಸಿನ ಮಾತು. 3030ಕ್ಕೆ ಮುಗಿದರೆ ದೊಡ್ಡದು (ನಗು..)

ಕ್ರೆಡಿಟ್‌ ತೆಗೆದುಕೊಳ್ಳುವ ಸಂಸದರು ಟ್ರಾಫಿಕ್ ಕಡಿಮೆ ಮಾಡೋಕೆ ಡಬಲ್‌ ಡೆಕ್ಕರ್‌ಗೆ ಹಣ ತರುತ್ತಾರಾ, ಅನುದಾನದ ಹೊಣೆ ಹೊರುತ್ತಾರಾ ಎಂದು ಕಾಂಗ್ರೆಸ್ಸಿಗರು ಕೇಳುತ್ತಿದ್ದಾರೆ?

-ಇವರಿಗೆ ಡಬಲ್‌ ಡೆಕ್ಕರ್‌, ಟನಲ್‌ ರೋಡ್‌ ಮಾಡಿ ಎನ್ನುತ್ತಿರುವವರು ಯಾರು? ಸುರಂಗ ಕೊರೆಯುವ ಯೋಜನೆಯ ಉದ್ದೇಶವೇ ಜನರ ಹಣ ಕೀಳುವುದು. ಇದು ಜಾಗತಿಕವಾಗಿ ಕಿಮೀಗೆ ಅತ್ಯಂತ ದುಬಾರಿ ವೆಚ್ಚದ ಯೋಜನೆ. ರಸ್ತೆ ಜಾಸ್ತಿ ಮಾಡಿದಲ್ಲಿ ಖಾಸಗಿ ವಾಹನಗಳ ಓಡಾಟ ಜಾಸ್ತಿ ಆಗುತ್ತದೆ ಅಷ್ಟೇ. ಇದೆ ಮೊತ್ತವನ್ನು ಫುಟ್‌ಪಾತ್‌, ಸಮೂಹ ಸಾರಿಗೆ ಮೆಟ್ರೋಗೆ ಯಾಕೆ ವ್ಯಯಿಸುತ್ತಿಲ್ಲ? ಪಾಟ್‌ ಹೋಲ್‌ ಮುಚ್ಚಲು ಆಗದ ಸರ್ಕಾರ ಟನಲ್‌ ರಸ್ತೆ ನಿರ್ಮಾಣಕ್ಕೆ ಹೊರಟಿದೆ, ಹಿಂದೆ ಕಳ್ಳತನ ಮಾಡೋಕೆ ಸುರಂಗ ಕೊರೆಯುತ್ತಿದ್ದರಲ್ಲ, ಇದು ಕೂಡ ಹಾಗೆ. ಟನಲ್‌ ರಸ್ತೆ ಭ್ರಷ್ಟಾಚಾರದ್ದು ಮಾತ್ರವಲ್ಲ ಅವೈಜ್ಞಾನಿಕ ಯೋಜನೆ. 

ಮೆಟ್ರೋ ಜನಸ್ನೇಹಿಯಾಗ್ತಿಲ್ಲ, ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಸೇರಿ ಸಾಕಷ್ಟು ಸಮಸ್ಯೆಗಳಿವೆಯಲ್ಲ?

-ನಗರದಲ್ಲಿ ಬಿಎಂಟಿಸಿಯಿಂದಲೇ ಬಸ್ ಸೇವೆ ಕೊಡಬೇಕೆಂಬ ಓಬಿರಾಯನ ಕಾಲದ ಕಾನೂನಿಗೆ ರಾಜ್ಯ ಸರ್ಕಾರ ಜೋತುಬಿದ್ದಿದೆ. ಬಿಎಂಟಿಸಿ ಎಂಬ ಮೊನೋಪೊಲಿ ವ್ಯವಸ್ಥೆ ಯಾಕೆ? ಬಿಎಂಆರ್‌ಸಿಎಲ್‌ನಿಂದಲೇ ಮಿನಿ ಬಸ್‌ಗಳನ್ನು ಮೆಟ್ರೋ ಪ್ರಯಾಣಿಕರಿಗೆಂದೆ ಯಾಕಾಗಿ ಒದಗಿಸಬಾರದು. ಖಾಸಗಿ ಮಿನಿ ಬಸ್‌ ಯಾಕೆ ಸಂಚರಿಸಬಾರದು? ಇದನ್ನು ಹಿಂದಿನಿಂದಲೂ ಕೇಳುತ್ತಿದ್ದೇವೆ. ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಪಾಸ್‌ ಒದಗಿಸುವ ಬೇರೆ ಕಡೆಯ ಮೆಟ್ರೋ ರೀತಿ ಜನಸ್ನೇಹಿ ಕೆಲಸ ನಮ್ಮಲ್ಲೂ ಆಗಬೇಕು. 

ಮೆಟ್ರೋವನ್ನು ತುಮಕೂರು, ರಾಮನಗರಕ್ಕೆ ವಿಸ್ತರಿಸುವ ಪ್ರಯತ್ನ ನಡೆದಿದೆಯಲ್ಲ.?

-ನೋಡಿ. ಮೆಟ್ರೋ ರೈಲ್ವೆ ಎನ್ನುವುದು ನಗರದ ಸಂಪರ್ಕ ಜಾಲದ ವ್ಯವಸ್ಥೆ. ರಾಜ್ಯ ರಾಜಕಾರಣಿಗಳು ಮೆಟ್ರೋ ವಿಸ್ತರಣೆಯನ್ನು ಸ್ವಹಿತಾಸಕ್ತಿ, ತಮ್ಮ ರಿಯಲ್‌ ಎಸ್ಟೇಟ್‌ ಮೌಲ್ಯ ಹೆಚ್ಚಿಸಲು ಬಳಸಿಕೊಳ್ಳುತ್ತಿರುವಂತೆ ತೋರುತ್ತಿದೆ. ಏರ್‌ಪೋರ್ಟ್‌ಗೆ ಸ್ಥಳ ನಿಗದಿ ಕಿತ್ತಾಟಕ್ಕೂ ಇದೇ ಕಾರಣ. ರಾಜಧಾನಿ ಸುತ್ತಲ ಬೇರೆ ನಗರಕ್ಕೆ ಬೆಂಗಳೂರಿನ ಸಂಪರ್ಕ ಕಲ್ಪಿಸಲು ಸಬ್‌ ಅರ್ಬನ್‌ ರೈಲು ಯೋಜನೆಯ ಅವಕಾಶ ಇರುವಾಗ ಯಾಕೆ ಮೆಟ್ರೋ ವಿಸ್ತರಿಸಬೇಕು ಹೇಳಿ. 

ಸಬ್‌ಅರ್ಬನ್‌ ರೈಲು ಸ್ಥಗಿತಗೊಂಡು ತಿಂಗಳಾಗಿದೆಯಲ್ಲ?

-ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಮಾವಧಿಗೆ ಮತ್ತೊಂದು ನಿದರ್ಶನ ಅಷ್ಟೇ. ಕೆಲಸ ನಡೆಯುತ್ತಿದ್ದ ಬೆಂಗಳೂರು ಸಬ್‌ಅರ್ಬ್‌ನ್‌ ಯೋಜನೆ (ಬಿಎಸ್‌ಆರ್‌ಪಿ) ಎರಡು ಮಾರ್ಗದ ಕಾಮಗಾರಿ ನಿಲ್ಲಲೂ ರಾಜ್ಯ ಸರ್ಕಾರವೇ ಕಾರಣ. ರೈಲ್ವೆ ತಂತ್ರಜ್ಞರನ್ನು ಕೆ-ರೈಡ್‌ಗೆ ಎಂಡಿ ಮಾಡುವಂತೆ ಸಾಕಷ್ಟು ಸಾರಿ ಕೇಳಿದ್ದೇವೆ. ಆದರೂ ಪುನಃ ಬುಧವಾರ ಐಎಎಸ್‌ ಅಧಿಕಾರಿಯನ್ನ ನೇಮಿಸಲಾಗಿದೆ. ಅವರಿಗೆ ಮತ್ತಾವುದೋ ಇಲಾಖೆಯ ಹೊಣೆ ಬೇರೆ ಇದೆ. ಈ ಯೋಜನೆ ಕೊಂದು ಹಾಕುವ ಎಲ್ಲ ಪ್ರಯತ್ನವೂ ರಾಜ್ಯ ಸರ್ಕಾರದ ಕಡೆಯಿಂದ ಆಗುತ್ತಿದೆ. ಶೀಘ್ರ ಇದರ ಪರಿಶೀಲನೆ ಸಭೆ ನಡೆಸುತ್ತೇವೆ. ಸಬ್‌ಅರ್ಬನ್‌ನಲ್ಲಿ ಕಾಸು ಹೊಡೆಯಲು ಕಡಿಮೆ ಅವಕಾಶ ಎನ್ನುವ ಕಾರಣಕ್ಕೆ ಒತ್ತು ಕೊಡುತ್ತಿಲ್ಲ ಎನ್ನಿಸುತ್ತದೆ.

Read more Articles on