ಸಚಿವ ಕೆ.ಎನ್‌.ರಾಜಣ್ಣ ಆತ್ಮಪೂರ್ತಿಯಾಗಿ ಹೆಂಡತಿ, ಮಕ್ಕಳು ಮತ್ತು ಮನೆಯನ್ನು ತೊರೆದು ಬಂದರೆ ಅವರಿಗೊಂದು ಮಠ ಕಟ್ಟಿಕೊಡಲು ಸಿದ್ಧ. ಅಥವಾ ನಮ್ಮದೇ ಪೀಠ ಬೇಕು ಎಂದರೂ ತ್ಯಾಗ ಮಾಡುತ್ತೇನೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

 ಬೆಂಗಳೂರು : ಸಚಿವ ಕೆ.ಎನ್‌.ರಾಜಣ್ಣ ಆತ್ಮಪೂರ್ತಿಯಾಗಿ ಹೆಂಡತಿ, ಮಕ್ಕಳು ಮತ್ತು ಮನೆಯನ್ನು ತೊರೆದು ಬಂದರೆ ಅವರಿಗೊಂದು ಮಠ ಕಟ್ಟಿಕೊಡಲು ಸಿದ್ಧ. ಅಥವಾ ನಮ್ಮದೇ ಪೀಠ ಬೇಕು ಎಂದರೂ ತ್ಯಾಗ ಮಾಡುತ್ತೇನೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಗುರುವಾರ ನಡೆದ ಕೆಂಪೇಗೌಡರ ಜಯಂತಿಯಲ್ಲಿ ಆಶೀರ್ವಚನ ನೀಡಿದ ಚಂದ್ರಶೇಖರ ಸ್ವಾಮೀಜಿ ‘ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು’ ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದರು. ಇದಕ್ಕೆ ಟಕ್ಕರ್‌ ಕೊಟ್ಟಿದ್ದ ಸಚಿವ ಕೆ.ಎನ್‌.ರಾಜಣ್ಣ, ‘ನಾನೂ ನಾಳೆ ಕಾವಿ ತೊಟ್ಟು ಬರುತ್ತೇನೆ. ಚಂದ್ರಶೇಖರ ಸ್ವಾಮೀಜಿ ತಮ್ಮ ಪೀಠವನ್ನು ಬಿಟ್ಟುಕೊಡುತ್ತಾರಾ?’ ಎಂದು ಪ್ರಶ್ನಿಸಿದ್ದರು.

ರಾಜಣ್ಣ ಅವರ ಈ ಸವಾಲಿಗೆ ಶುಕ್ರವಾರ ತಮ್ಮನ್ನು ಭೇಟಿಯಾದ ಕೆಲ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಆತ್ಮಪೂರ್ತಿಯಾಗಿ ಹೆಂಡತಿ, ಮಕ್ಕಳು, ಮನೆಯನ್ನು ಬಿಟ್ಟು ಬಂದರೆ ರಾಜಣ್ಣ ಅವರಿಗೆ ಕಾವೇರಿ ತಟದಲ್ಲಿ 10 ಎಕರೆ ಜಾಗದಲ್ಲಿ ಒಂದು ಮಠ ಕಟ್ಟಿಕೊಡುವ ಜವಾಬ್ದಾರಿ ನಮ್ಮದು. ಅವರಿಗೆ ಹೊಸ ಮಠ ಬೇಡ ಎನ್ನುವುದಾದರೆ ನಮ್ಮ ಪೀಠವನ್ನೇ ತ್ಯಾಗ ಮಾಡಲೂ ನಾನು ಸಿದ್ಧನಿದ್ದೇನೆ’ ಎಂದರು.

ಏಕವಚನದಲ್ಲಿ ವಾಗ್ದಾಳಿ:

ಇದೇ ವೇಳೆ ರಾಜಣ್ಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿಯನ್ನೂ ನಡೆಸಿದ ಸ್ವಾಮೀಜಿ, ‘ರಾಜಣ್ಣ ಅವನ್ಯಾರೋ ತರ್ಲೆ ಅವನು. ಅವನಿಗೆ ಸಂಬಂಧ ಇಲ್ಲದಿದ್ದರೂ ಚಪಲವಾದ ಬಾಯಿ ಏನೋ ಒದರಬೇಕೆಂದು ಒದರಿರಬಹುದು. ನಾನು ಅವನನ್ನು ನೋಡೇ ಇಲ್ಲ. ಅವನ್ಯಾರು ಅಂತಲೂ ಗೊತ್ತಿಲ್ಲ. ಅವನ ಮಾತಿಗೆ ತೂಕ ಇಲ್ಲ. ಅವನಿಗೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ’ ಎಂದರು.

ಯಾವ ಕಾರಣಕ್ಕೆ ಸಚಿವ ರಾಜಣ್ಣ ಈ ರೀತಿ ಹೇಳಿರಬಹುದು ಎಂಬ ಪ್ರಶ್ನೆಗೆ, ‘ಅವನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಆ ರೀತಿ ಹೇಳಿರಬಹುದು. ನಾನು ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ತೂಕದ ಮನುಷ್ಯರು. ಇಬ್ಬರೂ ಜೊತೆಯಲ್ಲಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಅನುಭವಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೂ ಒಂದು ಬಾರಿ ಅಧಿಕಾರ ಸಿಕ್ಕಿದರೆ ಅವರಿಗೂ ಸಂತೋಷ. ರಾಜ್ಯದ ಜನರಿಗೂ ಸಂತೋಷ ಆಗುತ್ತದೆ ಎನ್ನುವ ದೃಷ್ಟಿಯಲ್ಲಿ ನಾನು ಮನವಿ ಮಾಡಿದ್ದೇನೆ’ ಎಂದರು.

ಒಂದು ವೇಳೆ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡದಿದ್ದರೆ ನಿಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ‘ನಾನು ಯಾವುದೇ ರೀತಿಯ ಹೋರಾಟ ಮಾಡುವುದಿಲ್ಲ. ದೇವರಲ್ಲಿ ಪ್ರಾರ್ಥಿಸುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತಂದವರಿಗೆ ಅಧಿಕಾರ ಕೊಡಿಸು ಒಬ್ಬರಿಗೆ ಪಕ್ಷಪಾತ ಮಾಡಬೇಡ ಎಂದು ಪ್ರಾರ್ಥನೆ ಮಾಡುತ್ತೇನೆ ಅಷ್ಟೆ’ ಎಂದು ಹೇಳಿದರು.

ಕೆಂಪೇಗೌಡರ ಜಯಂತಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂಬ ಆರೋಪವಿದೆಯಲ್ಲಾ ಎಂಬ ಪ್ರಶ್ನೆಗೆ, ‘ಯಾಕೆ ಕಾರ್ಯಕ್ರಮಕ್ಕೆ ಅವರನ್ನು ಆಗಹ್ವಾನಿಸಿಲ್ಲ ಎಂದು ನನಗೆ ಗೊತ್ತಿಲ್ಲ. ಮನುಷ್ಯನ ಮನಸ್ಸು ಅವರವರ ಮನಸ್ಸು ಏನಿರುತ್ತದೆ ಅದರಂತೆ ಮಾಡುತ್ತಾರೆ’ ಎಂದರು.