ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದ ಹಿನ್ನೆಲೆಯಲ್ಲಿ ಬಾಗಲಕೋಟೆ ಯಲ್ಲಿ ಭಾನುವಾರ ಹಿಂದೂ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇತ್ತೀಚೆಗಷ್ಟೇ ನಡೆದ ಶಿವಾಜಿ ಮಹಾರಾಜರ ಜಯಂತಿ ವೇಳೆ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದ ಘಟನೆ ನಡೆದಿತ್ತು. ಇದರ ನಡುವೆಯೇ ಆರ್‌ಎಸ್‌ಎಸ್‌ ಭಾನುವಾರ ಬಾಗಲಕೋಟೆಯಲ್ಲಿ ಭವ್ಯ ಕೇಸರಿ ಶಕ್ತಿ ಪ್ರದರ್ಶನ ಏರ್ಪಡಿಸಿತ್ತು. ಪೊಲೀಸರ ತೀವ್ರ ಕಟ್ಟೆಚ್ಚರ ಹಾಗೂ ಬಿಗಿ ಭದ್ರತೆ ನಡುವೆ ಶೋಭಾಯಾತ್ರೆ ನಿರಾತಂಕವಾಗಿ ಜರುಗಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಹಿಂದೂ ಸಮ್ಮೇಳನ ನಡೆಯಿತು. ಇದರ ನಿಮಿತ್ತ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ಪಂಕಾ ಮಸೀದಿ ಹಾಗೂ ಮುಂಭಾಗದ ಮುಸ್ಲಿಂ ಸಮಾಜದವರಿಗೆ ಸೇರಿದ ಅಂಗಡಿಗಳು ಕಾಣದಂತೆ ಪೊಲೀಸರು ಬೃಹತ್ ಪರದೆ ಹಾಕಿದ್ದರು. ಪಂಕಾ ಮಸೀದಿ ಬಳಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಶೋಭಾಯಾತ್ರೆಗೆ ನಗರದ ವೆಂಕಟಪೇಟೆ ವೆಂಕಟೇಶ್ವರ ದೇವಸ್ಥಾನದಿಂದ ಗೋಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಮಹಾಪುರುಷರ ಸ್ತಬ್ಧಚಿತ್ರ, ಮಕ್ಕಳ ವೇಷಭೂಷಣ, ಕರಡಿ ಮಜಲು, ಹಲಗೆ ಮಜಲು, ಡೊಳ್ಳು ಕುಣಿತ ಸೇರಿ ಸ್ವದೇಶಿ ವಾದ್ಯಗಳು ಯಾತ್ರೆಯಲ್ಲಿ ಗಮನ ಸೆಳೆದವು. ಸಮ್ಮೇಳನದ ಹಿನ್ನೆಲೆಯಲ್ಲಿ ಮುಳುಗಡೆ ನಗರಿ ಕೇಸರಿಮಯವಾಗಿತ್ತು. ನಗರದಲ್ಲಿ ಕೇಸರಿ ಕಮಾನ್‌ಗಳು, ಬ್ಯಾನರ್, ಬಂಟಿಂಗ್ಸ್‌ಗಳ ಭರಾಟೆ ಎದ್ದು ಕಾಣುತ್ತಿತ್ತು.

ಅಂದಾಜು 5000ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಯಾತ್ರೆಯಲ್ಲಿ ಸೇರಿದ್ದರು. ಪಂಕಾ ಮಸೀದಿ ಮುಂಭಾಗದಲ್ಲೇ ಭರ್ಜರಿ ಮೆರವಣಿಗೆ ಸಾಗಿತು. ಬಸವೇಶ್ವರ ವೇಷಧಾರಿ ಮೆರವಣಿಗೆಯಲ್ಲಿ ಎದ್ದು ಕಂಡಿತು. ಜತೆಗೆ ಸಾವಿರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಸದ್ದಿನಲ್ಲಿ ಹಿಂದುಪರ ಘೋಷಣೆ ಹಾಕುತ್ತ ಹಿಂದೂ ಕಾರ್ಯಕರ್ತರು ಹೊರಟರಲ್ಲದೆ, ಮಸೀದಿ ಮುಂಭಾಗ ಕೇಸರಿ ಶಾಲು ತೂರುತ್ತ ಭರ್ಜರಿಯಾಗಿ ಕುಣಿದರು.

ಪಂಕಾ ಮಸೀದಿ ಬಳಿ ಬಂದಾಗ, ದೇಶಭಕ್ತಿಯ ಘೋಷಣೆ ಕೂಗುತ್ತಾ ಹಿಂದೂ ಯುವಕರು ಸಂಭ್ರಮಿಸಿದರು, ಯಾತ್ರೆಯಲ್ಲಿ ಸಂಸದ ಪಿ.ಸಿ ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಹಲವರು ಭಾಗಿಯಾಗಿದ್ದರು.