ಸಾರಾಂಶ
ಹಾವೇರಿ: ಕನ್ನಡ ನಾಡಿನ ನೆಲ,ಜಲ ಮತ್ತು ಭಾಷೆಯ ಸಮೃದ್ಧಿಗೆ ಶ್ರಮಿಸಿದ ಶ್ರೇಯಸ್ಸು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ನಾಡಿಗೆ ಸಂಬಂಧಿಸಿದಂತೆ ಪ್ರಕಟಣೆ, ಸಂಶೋಧನೆ, ನಿಘಂಟು ರಚನೆ ಮಾಡಿ ಮುಂದಿನ ಪೀಳಿಗೆಗೆ ಮಹತ್ತರ ಮೈಲಿಗಲ್ಲು ರೂಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕ್ರಿಯಾಶೀಲ ಚಟುವಟಿಕೆಯಿಂದ ಗುರುತಿಸಿಕೊಂಡಿದೆ. ಹಾವೇರಿಯ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಆಡಳಿತ ಕಚೇರಿಯ ಪೂರಕ ಅಭಿವೃದ್ಧಿ ಕಾಮಗಾರಿಗಳು ಮುಂದುವರೆದಿವೆ. ಸ್ವಾಯತ್ತ ಸಂಸ್ಥೆಗೆ ಸ್ವತಂತ್ರ ಕಚೇರಿ ಹೊಂದಿರುವುದು ನಮ್ಮ ಶ್ರಮ ಸಾರ್ಥಕಗೊಳಿಸಿದೆ. ಮುಂದಿನ ದಿನಗಳಲ್ಲಿ ನಾವು ನಿಭಾಯಿಸುವ ಹೊಣೆಗಾರಿಕೆ ಇನ್ನೂ ಇದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಪ್ರಾಧ್ಯಾಪಕ ಡಾ. ಸಂಜೀವ ಆರ್ . ನಾಯಕ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಸದಾ ಸ್ಮರಣೀಯರು. ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ದೀರ್ಘಕಾಲ ಸಾಗಿ ಬಂದಿದೆ ಎಂದರು.
ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಕನ್ನಡದ ಅಸ್ಮಿತೆಗೆ ತನ್ನನ್ನು ಅರ್ಪಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನೇಕರು ಶ್ರಮಿಸಿದ್ದಾರೆ. ನಮ್ಮ ನೆಲದ ಚಂಪಾ ಮತ್ತು ವಿ.ಕೃ. ಗೋಕಾಕ್ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಅಭಿಮಾನವನ್ನು ಎಂದಿಗೂ ಮರೆಯಲಿಲ್ಲ. ಅವರೆಲ್ಲ ನಮಗೆ ಪ್ರೇರಣೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವರ್ಗ ಮತ್ತು ವರ್ಣ ರಹಿತವಾಗಿ ಬಹುಸಂಖ್ಯಾತ ಸದಸ್ಯರನ್ನು ಒಳಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರನ್ನು ಸ್ಮರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿದರು.ಸುಲೋಚನಾ ನಂದಿ, ಡಾ. ವಿ.ಪಿ.ದ್ಯಾಮಣ್ಣವರ, ಈರಣ್ಣ ಬೆಳವಡಿ, ಎಸ್.ಆರ್. ಹಿರೇಮಠ, ಹನುಮಂತಗೌಡ ಗೊಲ್ಲರ, ಸಿ.ಎಸ್. ಮರಳಿಹಳ್ಳಿ, ಸುಭಾಷ್ ಕುರುಬರ, ರಾಜೇಂದ್ರ ಹೆಗಡೆ, ಸಿದ್ದೇಶ್ವರ ಹುಣಸಿಕಟ್ಟಿಮಠ, ಶಕುಂತಲಾ ದಾಳೇರ, ರೇಣುಕಾ ಗುಡಿಮನಿ, ಅಕ್ಕಮಹಾದೇವಿ ಹಾನಗಲ್ಲ, ಜುಬೇದಾ ನಾಯ್ಕ್, ಡಾ. ಗೀತಾ ಸುತ್ತಕೋಟಿ ಉಪಸ್ಥಿತರಿದ್ದರು.
ಜಿ.ಎಂ. ಓಂಕಾರಣ್ಣವರ ನಿರೂಪಿಸಿದರು. ಬಿ.ಪಿ. ಶಿಡೇನೂರ ಸ್ವಾಗತಿಸಿದರು. ಅರಳಿಕಟ್ಟಿ ಗೂಳಪ್ಪ ವಂದಿಸಿದರು.ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಜಿಲ್ಲೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿ ಗಮನ ಸೆಳೆದಿದೆ. ಇಂಥ ಚಟುವಟಿಕೆ ಮುಂದುವರೆಯಲಿ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದ್ದಾರೆ.