ಸಂತ ಸೇವಾಲಾಲ್ ಜಯಂತಿ: ನಾಳೆ ಸಿಎಂರಿಂದ ಉದ್ಘಾಟನೆ

| Published : Feb 13 2025, 12:46 AM IST

ಸಾರಾಂಶ

ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಫೆ.13ರ ಇಂದಿನಿಂದ 15 ರವರೆಗೆ 286ನೇ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಸಮಾಜದ ಮುಖಂಡ ರಾಘವೇಂದ್ರ ನಾಯ್ಕ್ ಹೇಳಿದ್ದಾರೆ.

- ಎಚ್‌ಡಿಕೆ, ಡಿಕೆಶಿ, ಎಚ್‌.ಕೆ.ಪಾಟೀಲ್‌, ಮಧು, ಸತೀಶ್‌, ಯಡಿಯೂರಪ್ಪ ಸೇರಿದಂತೆ ಗಣ್ಯಾತಿಗಣ್ಯರು ಭಾಗಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಫೆ.13ರ ಇಂದಿನಿಂದ 15 ರವರೆಗೆ 286ನೇ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಸಮಾಜದ ಮುಖಂಡ ರಾಘವೇಂದ್ರ ನಾಯ್ಕ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಫೆ.14ರ ಮಧ್ಯಾಹ್ನ 2ಕ್ಕೆ ಪ್ರಧಾನ ವೇದಿಕೆಯಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾತಿರಾಂ ಬಾವಾಜಿ ಸಭಾಂಗಣ ಉದ್ಘಾಟಿಸಿದರೆ, ವಿಹಾರ ವನವನ್ನು ಎಚ್.ಕೆ.ಪಾಟೀಲ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡವನ್ನು ಡಾ.ಪ್ರಕಾಶ್ ರುದ್ರಪ್ಪ ಪಾಟೀಲ್ ಮತ್ತು ಸೇವಾಲಾಲ್ ಸರೋವರವನ್ನು ಸಂಜಯ್ ಡಿ.ರಾಥೋಡ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಡಾ. ಎಚ್.ಸಿ.ಮಹಾದೇವಪ್ಪ ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆ ಮಾಡಲಿದ್ದು, ಸಚಿವರಾದ ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ, ಮಾಜಿ ಸಿಎಂ ಯಡಿಯೂರಪ್ಪ, ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಸ್ಥಳೀಯ ಶಾಸಕ ಡಿ.ಜಿ.ಶಾಂತನಗೌಡ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದರು.

ಸಂಜೆ 5.30ಕ್ಕೆ ಮಹಾ ವೇದಿಕೆಯಲ್ಲಿ ''''ಸಂಘ, ಸಂಸ್ಥೆ ಮತ್ತು ಧಾರ್ಮಿಕ ಮುಖಂಡರ ಸಮಾವೇಶ'''' ನಡೆಯಲಿದೆ. ಸೇನಾಭಗತ್ ಮಹಾರಾಜ್, ಸಿದ್ದಲಿಂಗ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮತ್ತು ಜಗನು ಮಹಾರಾಜ್ ಸೇರಿದಂತೆ ಇನ್ನಿತರ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಾವೇಶ ಉದ್ಘಾಟಿಸಲಿದ್ದಾರೆ. ಉಪ ಸಭಾಪತಿ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ''''ಬಂಜಾರ ಆಧ್ಯಾತ್ಮಿಕ, ಸಂಸ್ಕೃತಿ ಮತ್ತು ಇತಿಹಾಸ'''''''' ಕೃತಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಮಾತನಾಡಿ, ನಿಗಮದ ವತಿಯಿಂದ ವಿದ್ಯುತ್ ಅಲಂಕಾರ, ಭಕ್ತರಿಗೆ ಊಟ-ಉಪಹಾರ, 40 ಸಾವಿರ ಮಜ್ಜಿಗೆ ಪ್ಯಾಕೆಟ್ ವಿತರಣೆ ಹಾಗೂ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬಿಜಾಪುರದಿಂದ 3 ಬಸ್‌ಗಳು ಹಾಗೂ ರಾಯಚೂರಿನಿಂದ 2 ಬಸ್‌ಗಳಲ್ಲಿ ಭಕ್ತರು ಆಗಮಿಸಲಿದ್ದು, ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ವೇಳೆ ಸಮಾಜದ ಮುಖಂಡ ಹನುಮಂತ ನಾಯ್ಕ್, ಮಂಜನಾಯ್ಕ್, ಪ್ರಕಾಶ್ ನಾಯ್ಕ್, ಡಾ. ಉತ್ತಮ ಇತರರು ಇದ್ದರು.

- - - -12ಕೆಡಿವಿಜಿ43.ಜೆಪಿಜಿ:

ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಆಯೋಜನೆ ಕುರಿತು ದಾವಣಗೆರೆ ರಾಘವೇಂದ್ರ ನಾಯ್ಕ್ ಮಾಹಿತಿ ನೀಡಿದರು.