ಸಾರಾಂಶ
ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಪಪಂ ವಿಪಕ್ಷದ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಜೋಡುಕೆರೆ ಮತ್ತು ಇತರೆಡೆಗಳಲ್ಲಿ ಸಾರ್ವಜನಿಕವಾಗಿ ಮೀನು ಮಾರಾಟ ಮಾಡುತ್ತಿದ್ದಾರೆ. ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಕುಳಿತುಕೊಳ್ಳದ ಇವರ ಕುರಿತು ಕ್ರಮ ಕೈಗೊಳ್ಳದೇ ಬಿಟ್ಟಿದ್ದು ಯಾಕೆ? ಇವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಈಗಲೇ ಕ್ರಮ ಜರುಗಿಸಿ ನಂತರ ಸಭೆ ಮುಂದುವರಿಸಿ ಎಂದು ಬಿಜೆಪಿ ಸದಸ್ಯ ಸೋಮೇಶ್ವರ ನಾಯ್ಕ ಆಗ್ರಹಿಸಿದರು. ಅದಕ್ಕೆ ಆಡಳಿತ ಪಕ್ಷದ ನಾಗರಾಜ ಅಂಕೋಲೆಕರ್, ರಾಜು ನಾಯ್ಕ ಧ್ವನಿ ಗೂಡಿಸಿದರು.ಈಗಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಬಿಜೆಪಿ ಸದಸ್ಯರಾದ ಸೋಮೇಶ್ವರನಾಯ್ಕ, ಆದಿತ್ಯ ಗುಡಿಗಾರ, ಶ್ಯಾಮಿಲಿ ಪಾಠಣಕರ್, ಕಲ್ಪನಾ ನಾಯ್ಕ, ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ ಗಾಂವ್ಕರ್ ಅವರೊಂದಿಗೆ ನಾಗರಾಜ ಅಂಕೋಲೆಕರ್ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು.ಕ್ರಮ ಕೈಗೊಂಡು ಎತ್ತಂಗಡಿ ಮಾಡಿಸಿದಾಗಲೂ ಅವರ ಬಗ್ಗೆ ಪಪಂ ಸದಸ್ಯರೇ ಕುಮ್ಮಕ್ಕು ನೀಡುತ್ತಿದ್ದು, ಮತ್ತೆ ಅವರನ್ನು ಅಲ್ಲೇ ಕೂರಿಸುತ್ತಾರೆ ಎಂದು ಮುಖ್ಯಾಧಿಕಾರಿ ಸುನೀಲ ಗಾವಡೆ ಹೇಳಿದರು. ಯಾವ ಸದಸ್ಯರು ಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದಾಗ ಮಂಜುನಾಥ ನಗರದ ಸದಸ್ಯ ಸತೀಶ ನಾಯ್ಕ ಮೀನು ಮಾರಾಟಗಾರರನ್ನು ಬೆಂಬಲಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಹೇಳಿದರು. ಈಗಲೇ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಭೆ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದಾಗ, ಆರೋಗ್ಯ ನಿರೀಕ್ಷಕ ಜೋಡುಕೆರೆಗೆ ತೆರಳಿ ಮೀನು ಮಾರಾಟಗಾರರ ಎತ್ತಂಗಡಿ ಮಾಡಿಸಿದರು. ಮೀನು ಮಾರುಕಟ್ಟೆ ಹೊರತುಪಡಿಸಿ ಇಡೀ ಪಟ್ಟಣದಲ್ಲಿ ಇತರೆಡೆ ಮೀನು ಮಾರಾಟ ಮಾಡುವವರಿಗೆ ನೋಟಿಸ್ ನೀಡಿ, ಒಂದು ವಾರದೊಳಗೆ ನಿಲ್ಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ತಟಗಾರ ಕ್ರಾಸ್‌ನಲ್ಲಿ ಬಸ್ ತಂಗುದಾಣ ನಿರ್ಮಿಸಲು ಅನುಕೂಲವಾಗುವಂತೆ ಅತಿಕ್ರಮಣ ತೆರವುಗೊಳಿಸುವಂತೆ ನೀಡಿದ ಮನವಿಗೆ ಸ್ಪಂದಿಸಿ, ತೆರವುಗೊಳಿಸಲು ತೀರ್ಮಾನಿಸಲಾಯಿತು.ಮುಂಗಡ ಪತ್ರಕ್ಕೆ ಅನುಮೋದನೆ: ಆನಂತರ 2025-26ನೇ ಸಾಲಿಗೆ ವಿವಿಧ ಮೂಲಗಳಿಂದ ₹22.38 ಕೋಟಿ ಆದಾಯ ಹಾಗೂ ₹22.31 ಕೋಟಿ ಖರ್ಚು ಅಂದಾಜಿಲಾಗಿದ್ದು, ₹6.68 ಲಕ್ಷ ಉಳಿತಾಯುದ ಮುಂಗಡ ಪತ್ರವನ್ನು ಸಭೆ ಅನುಮೋದಿಸಿತು.
ಸೆಪ್ಕಿಟ್ ಟ್ಯಾಂಕ್ ಕ್ಲೀನಿಂಗ್ ಯಂತ್ರ ಖರೀದಿಸಲು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ನಾವು ಕೋಟ್ ಮಾಡಿದ ದರಕ್ಕೆ ಯಾರೂ ಟೆಂಡರ್ ಹಾಕಲಾರರು ಎಂದು ಸದಸ್ಯ ರಾಜು ನಾಯ್ಕ ಹೇಳಿದರು.ಶೇ. 24.10 ಹಾಗೂ ಶೇ. 7.5 ಮತ್ತು ಶೇ. 5 ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಿ ಮಂಜೂರಿ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.