- ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಾಗೂ ಶೈಕ್ಷಣಿಕ ಕಿಟ್ ಕೊಡುಗೆಕನ್ನಡಪ್ರಭ ವಾರ್ತೆ ಮೈಸೂರು
ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಹಾಗೂ ಐ.ಐ.ಎಫ್.ಎಲ್ ಸಂಸ್ಥೆ ಆಶ್ರಯದಲ್ಲಿ ಸಿ.ಎಸ್.ಆರ್. ಯೋಜನೆಯಡಿ ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಿನಿ ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಕೊಡುಗೆ ನೀಡಿ ಶಾಲೆಯ ಶೈಕ್ಷಣಿಕ ಮೂಲಸೌಲಭ್ಯ ಬಲಪಡಿಸಲಾಯಿತು.ಶಾಲೆಯ ಪ್ರಭಾರ ಉಪ ಪ್ರಾಂಶುಪಾಲ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮರ್ಥನಂ ಟ್ರಸ್ಟ್ ಹಾಗೂ ಐ.ಐ.ಎಫ್.ಎಲ್. ಫೌಂಡೇಶನ್ ವತಿಯಿಂದ ದೊರೆತಿರುವ ಮಿನಿ ವಿಜ್ಞಾನ ಪ್ರಯೋಗಾಲಯ ಮತ್ತು ಡಿಜಿಟಲ್ ಸ್ಮಾರ್ಟ್ ಬೋರ್ಡ್ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಹಾಗೂ ಸಂಶೋಧನಾ ಮನೋವೃತ್ತಿ ಬೆಳೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜ್ಞಾನ ವಿಸ್ತರಿಸಿಕೊಳ್ಳಬೇಕು ಹಾಗೂ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಆಶಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಮರ್ಥನಂ ಟ್ರಸ್ಟ್ ನ ಶಿಕ್ಷಣ ವಿಭಾಗದ ಮುಖ್ಯಸ್ಥ ಗುರುರಾಘವೇಂದ್ರ ಅವರು, ತಾವು ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದು, ಸರ್ಕಾರಿ ಶಾಲೆಗಳ ಮಹತ್ವವನ್ನು ಮನಗಂಡು ಅವುಗಳನ್ನು ಸದೃಢಗೊಳಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಸಮರ್ಥನಂ ಟ್ರಸ್ಟ್ ಕಳೆದ 28 ವರ್ಷಗಳಿಂದ ಡಾ.ಜಿ.ಕೆ. ಮಹಾಂತೇಶ್ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಅಂಗವಿಕಲರು, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಶೈಕ್ಷಣಿಕ, ಕೌಶಲ್ಯ, ಕ್ರೀಡೆ ಮತ್ತು ಜೀವನೋಪಾಯ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಸಂಸ್ಥೆಯು ದೇಶಾದ್ಯಂತ 1,500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಮಿನಿ ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಾಗೂ ಟಿಂಕರಿಂಗ್ ಲ್ಯಾಬ್‌ಸ್ಥಾಪಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ ಎಂದು ತಿಳಿಸಿದರು.
ಐ.ಐ.ಎಫ್.ಎಲ್. ಸಂಸ್ಥೆಯ ಸೇಲ್ಸ್ ವಿಭಾಗೀಯ ವ್ಯವಸ್ಥಾಪಕ ಟಿ.ಸಿ. ಶಿವಕುಮಾರ್, ಶಾಲೆಯ ಪ್ರಾಂಶುಪಾಲ ಕುಮಾರ್, ಐ.ಐ.ಎಫ್.ಎಲ್. ವ್ಯವಸ್ತಾಪಕಿ ಕನಕಲತಾ, ಹಿರಿಯ ಶಿಕ್ಷಕರಾದ ಪೂರ್ಣಿಮಾ, ಶಿವಕುಮಾರ್, ಸಮರ್ಥನಂ ಟ್ರಸ್ಟ್ ನ ಲೋಕೇಶ್ ಕುಮಾರ್, ಶಿವರಾಜು, ಸುರೇಂದ್ರ ಕುಮಾರ್, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.