ಸಂತೆ ಮಾರುಕಟ್ಟೆ ಕಾಮಗಾರಿ ನನೆಗುದಿಗೆ, ಜನರ ಆಕ್ರೋಶ

| Published : Dec 21 2023, 01:15 AM IST

ಸಾರಾಂಶ

ಹರಪನಹಳ್ಳಿ ಪಟ್ಟಣದ ಪುರಸಭೆ ಹಿಂಭಾಗ ನಿರ್ಮಿಸುತ್ತಿರುವ ದಿನವಹಿ, ವಾರದ ಸಂತೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡು ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದೆ. ಪುರಸಭೆ ವತಿಯಿಂದ ₹2.75 ಕೋಟಿಗೆ ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾಗಿತ್ತು. 2022 ಸೆ. 7ರಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ 9 ತಿಂಗಳಿಂದ ಕಾಮಗಾರಿ ನಡೆದಿಲ್ಲ. ಸಾರ್ವಜನಿಕರಿಗೆ ತರಕಾರಿ ಖರೀದಿಗೆ 2-3 ಕಿಲೋಮೀಟರ್ ದೂರ ಹೋಗಬೇಕಿದ್ದು, ಕೂಡಲೇ ಕಾಮಗಾರಿ ಮುಗಿಸುವಂತೆ ಆಗ್ರಹಿಸಿದ್ದಾರೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಪಟ್ಟಣದ ಪುರಸಭೆ ಹಿಂಭಾಗ ನಿರ್ಮಿಸುತ್ತಿರುವ ದಿನವಹಿ, ವಾರದ ಸಂತೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡು ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಸಂತೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊದಲಿನಿಂದಲೂ ದಿನವಹಿ ಹಾಗೂ ವಾರದ ಸಂತೆ ಈ ಜಾಗದಲ್ಲಿಯೇ ನಡೆಯುತ್ತಿತ್ತು. ಕಾಲಕ್ಕೆ ತಕ್ಕಂತೆ ನೂತನ ಸಂತೆ ಮಾರುಕಟ್ಟೆ ನಿರ್ಮಿಸಲು ಪುರಸಭೆಯವರು ಐಡಿಎಸ್‌ಎಂಟಿ ಆವರ್ತ ನಿಧಿಯಲ್ಲಿ ಅನುದಾನ ನಿಗದಿಗೊಳಿಸಿದರು. ಟೆಂಡರ್‌ ಪ್ರಕ್ರಿಯೆ ನಡೆದು ₹2.75 ಕೋಟಿ ವೆಚ್ಚದಲ್ಲಿ ಮಂಗಳೂರಿನ ಕೆ.ಆರ್‌. ಜನಾರ್ದನ ಎಂಬ ಗುತ್ತಿಗೆದಾರ ಕಾಮಗಾರಿ ನಿರ್ಮಿಸಲು ಮುಂದಾದರು. ಆ ಪ್ರಕಾರ 2022 ಸೆ. 7ರಂದು ಅಂದಿನ ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು. ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು 9 ತಿಂಗಳು ಕಾಲವಕಾಶ ನೀಡಿದರು.

ಇಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುವವರೆಗೂ ದಿನವಹಿ ಹಾಗೂ ಪ್ರತಿ ಶನಿವಾರ ನಡೆಯುವ ವಾರದ ಸಂತೆಯನ್ನು ಕೋಟೆ ಕಾಳಮ್ಮನ ದೇವಸ್ಥಾನದ ಬಳಿ ನಡೆಸಲು ತೀರ್ಮಾನಿಸಿ ಈ ವರೆಗೂ ನಡೆದುಕೊಂಡು ಬಂದಿದೆ. ಇತ್ತ ಗುತ್ತಿಗೆದಾರರು ಶೇ. 40ರಷ್ಟು ಕಾಮಗಾರಿ ಮಾಡಿ ಆನಂತರ 9 ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಚಾವಣಿ, ಕಟ್ಟೆಗಳು, ನೆಲಹಾಸು ಮುಂತಾದ ಕಾಮಗಾರಿ ಕೆಲಸ ಬಾಕಿ ಇದೆ. ಈ ವರೆಗೂ ಗುತ್ತಿಗೆದಾರ ಈ ಕಡೆ ತಿರುಗಿ ನೋಡುತ್ತಾ ಇಲ್ಲ, ಪುರಸಭೆಯವರು ಸಂಬಂಧಿಸಿದ ಗುತ್ತಿಗೆದಾರನಿಗೆ ಈಗಾಗಲೇ ನೋಟೀಸ್‌ ನೀಡಿ ಎಚ್ಚರಿಸಿದರೂ ಗುತ್ತಿಗೆದಾರ ತಲೆ ಕೆಡಿಸಿಕೊಂಡಂತೆ ಕಾಣುತ್ತಾ ಇಲ್ಲ.

ಈಗ ತಾತ್ಕಾಲಿಕವಾಗಿ ಕೋಟೆ ಕಾಳಮ್ಮನ ದೇವಸ್ಥಾನದ ಬಳಿ ನಡೆಯುತ್ತಿರುವ ಸಂತೆ ಪಟ್ಟಣಕ್ಕೆ ಸಾಕಷ್ಟು ದೂರವಾಗುತ್ತದೆ. 1 ಕಿಲೋ ಮೀಟರ್‌ನಿಂದ ಹಿಡಿದು 3 ಕಿಲೋ ಮೀಟರ್‌ ವರೆಗೂ ಸಾರ್ವಜನಿಕರಿಗೆ ದೂರವಾಗುತ್ತದೆ. ಸಂತೆಗೆ ಹೋಗಿ ತರಕಾರಿ ತೆಗೆದುಕೊಂಡು ನಡೆದುಕೊಂಡಬರಲು ಸಾಧ್ಯವಿಲ್ಲ. ₹50 ಕೊಟ್ಟು ಆಟೋದಲ್ಲಿಯೇ ಬರಬೇಕು. ಇಂತಹ ಪರಿಸ್ಥಿತಿ 9 ತಿಂಗಳಿನಿಂದ ಇದೆ.

ಇದರಿಂದ ಜನರೂ ಯಾವಾಗ ಮೊದಲಿನ ಸಂತೆ ಮಾರುಕಟ್ಟೆ ಸಿದ್ಧವಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ವ್ಯಾಪಾರಸ್ಥರು ಈಗಿರುವ ಜಾಗದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಗೊಣಗುತ್ತಾರೆ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಮರು ಟೆಂಡರ್‌ ಕರೆಯಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಅಪೂರ್ಣಗೊಂಡು ಸ್ಥಗಿತಗೊಂಡಿರುವ ಸಂತೆ ಮಾರುಕಟ್ಟೆ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಈಗಾಗಲೇ ಎರಡು ನೋಟಿಸ್‌ ನೀಡಿ ಎಚ್ಚರಿಸಲಾಗಿದೆ. ಮೂರನೇ ನೋಟಿಸ್‌ ನೀಡಿ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಹೇಳುತ್ತಾರೆ.ಬೇಗ ಬೇಗ ಕೆಲಸ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಕಾಮಗಾರಿ ಪುನರಾರಂಭ ಮಾಡದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ಲಾಟಿದಾದಾಪೀರ ಆಗ್ರಹಿಸಿದ್ದಾರೆ.