ಗದಗ ನಗರದ ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅಕ್ಷರದಮಾತೆ ಸಾವಿತ್ರಿಬಾಯಿ ಪುಲೆ 195ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಗದಗ: ಶಿಕ್ಷಣದ ಜತೆಗೆ ಸಮಾಜದಲ್ಲಿ ಸಮಾನತೆ ಸಿಗುವಂತೆ ಪ್ರಯತ್ನಿಸಿ, ಹೆಣ್ಣುಮಕ್ಕಳ ಪಾಲಿಗೆ ನಿಜ ಶಾರದೆಯಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿಮನಿ ಹೇಳಿದರು.
ನಗರದ ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಅಕ್ಷರದಮಾತೆ ಸಾವಿತ್ರಿಬಾಯಿ ಪುಲೆ 195ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕ್ಷರದಮಾತೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರು ಚರಿತ್ರೆಯಲ್ಲಿ ಬರುವುದಕ್ಕಿಂತ ಪೂರ್ವ ಒಂದು ಕಾಲಘಟ್ಟದಲ್ಲಿ ದೇಶದ ಮಹಿಳೆಯನ್ನು ವಂಚಿಸಿ ಶಿಕ್ಷಣದಿಂದ ದೂರವಿರಿಸಿ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಆ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಅವರಿಗೂ ಶಿಕ್ಷಣದ ಜತೆ ಸಮಾಜದಲ್ಲಿ ಸಮಾನತೆ ಸಿಗುವಂತೆ ಪ್ರಯತ್ನಿಸಿದರು ಎಂದರು.ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರ ಜೀವನ ಪ್ರತಿಯೊಬ್ಬ ಸ್ವಾಭಿಮಾನಿ ಮಹಿಳೆಗೆ ಸ್ಫೂರ್ತಿಯಾಗಿದ್ದು, ಅವರ ಸಾಮಾಜಿಕ ಕಳಕಳಿ ಮಹಿಳೆಯರ ಏಳ್ಗಿಗಾಗಿ ಶ್ರಮಿಸಿದ ಪರಿ ಕಷ್ಟಕರವಾಗಿದ್ದರೂ ಎದುರಿಸಿ ಸಾಧನೆ ಮಾಡಿರುವುದು ಅದ್ಭುತವಾದುದಾಗಿದೆ. ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರು ಮೇಲಿನಮನಿ, ಕಾರ್ಯದರ್ಶಿ ಮುತ್ತು ಮಾದರ, ತಾಲೂಕು ಸಂಚಾಲಕ ವಿನಾಯಕ ಬಳ್ಳಾರಿ, ಮಂಜುನಾಥ ಮುಳಗುಂದ ಹಾಗೂ ವಿಶಾಲ ಗೋಶಲ್ಲನವರ ಮಾತನಾಡಿದರು.ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ನಾಗರಾಜ ಗುತ್ತಿ ದಲಿತ ಕಲಾಮಂಡಳಿ ಸಂಚಾಲಕ ಅವರಿಂದ ಕ್ರಾಂತಿಗೀತೆ ಮೂಡಿಬಂದವು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ ಪವಾರ, ನಿಲಯ ಪಾಲಕ ಸುಜಾತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಕೃಷ್ಣ ಪೂಜಾರ ಸ್ವಾಗತಿಸಿದರು. ಹರೀಶ ಭಾವಿಮನಿ ವಂದಿಸಿದರು.