ನಿತ್ಯ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಾಕುವುದು ಕಡಿಮೆ ಮಾಡಿ, ಒಂದು ವೇಳೆ ಹಾಕಲೆ ಬೇಕಾದರೆ ಆನ್‌ಲೈನ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ನಿಮ್ಮ ಪೋಟೋ ಅಥವಾ ವಿಡಿಯೋಗಳನ್ನು ಎಐ ತಂತ್ರಜ್ಞಾನ ಬಳಸಿ ಕೆಟ್ಟದಾಗಿ ಬಳಸಿಕೊಳ್ಳುವ ವಂಚಕರಿಂದ ಎಚ್ಚರಿಕೆಯಿಂದ ಇರಿ ಎಂದು ಆನವಟ್ಟಿ ಪಿಎಸ್‌ಐ ಚಂದನ್ ಜಗದೀಶ್ ಚಲುವಯ್ಯ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ನಿತ್ಯ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಾಕುವುದು ಕಡಿಮೆ ಮಾಡಿ, ಒಂದು ವೇಳೆ ಹಾಕಲೆ ಬೇಕಾದರೆ ಆನ್‌ಲೈನ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ನಿಮ್ಮ ಪೋಟೋ ಅಥವಾ ವಿಡಿಯೋಗಳನ್ನು ಎಐ ತಂತ್ರಜ್ಞಾನ ಬಳಸಿ ಕೆಟ್ಟದಾಗಿ ಬಳಸಿಕೊಳ್ಳುವ ವಂಚಕರಿಂದ ಎಚ್ಚರಿಕೆಯಿಂದ ಇರಿ ಎಂದು ಆನವಟ್ಟಿ ಪಿಎಸ್‌ಐ ಚಂದನ್ ಜಗದೀಶ್ ಚಲುವಯ್ಯ ಸಲಹೆ ನೀಡಿದರು.ಬುಧವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕುಮಟ್ಟದ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಆನ್‌ಲೈನ್ ನಲ್ಲಿ ಬರುವ ಜಾಬ್‌ಗಳನ್ನು ನಂಬಿ, ಹಣ ಪಾವತಿಸಬೇಡಿ ಮತ್ತು ಅವರು ಹೇಳುವ ಪ್ರದೇಶಕ್ಕೆ ಹೋಗದಿರಿ, ಅಧಿಕೃತವಾಗಿ ನಂಬಿಕೆಗೆ ಅರ್ಹವಾದ ದಿನಪತ್ರಿಕೆ ಅಥವಾ ನೋಂದಾವಣೆಯಾಗಿರುವ ಮೂಲಗಳಿಂದ ಬಂದ ಜಾಬ್‌ಗಳಿಗೆ ಮಾತ್ರ ಅರ್ಜಿ ಹಾಕಿ ಎಂದು ಸಲಹೆ ನೀಡಿದರು.ಮದ್ಯ ವಯಸ್ಸಿನ ಮಹಿಳೆಯರಲ್ಲಿ ಋತುಚಕ್ರ ಅವಧಿಗೆ ಸರಿಯಾಗಿ ಆಗದೆ ಇರುವುದು, ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಮಾರಣಾಂತಿಕ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರಬಹುದು. ಮಹಿಳೆಯರು ಮುಜುಗರ ಪಟ್ಟುಕೊಂಡು, ಮಾನಸಿಕ ಖಿನ್ನತೆಗೆ ಒಳಗಾಗದೆ ವೈದ್ಯರ ಬಳಿ ಹೇಳಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ ಎಂದು ಬೆಟ್ಟದ ಕೂರ್ಲಿ ಆರೋಗ್ಯ ಕೇಂದ್ರದ ವೈದ್ಯ ವಿಜೇತ ಅವರು ಸಲಹೆ ನೀಡಿದರು.
ಜ್ಞಾನವಿಕಾಸ ಮಹಿಳೆಯರು ಪ್ರಕೃತಿಯಲ್ಲಿ ಸಿಗುವ ತೆಂಗಿನ ಗಿಡದ ಗರಿಗಳು ಹಾಗೂ ಹೂಗಳಿಂದ ವೇದಿಕೆಯನ್ನು ವಿಶೇಷವಾಗಿ ಅಲಂಕಾರಗೊಳಿಸಿದ್ದರು. ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಆರತಿ ತಟ್ಟೆ ಸ್ಪರ್ಧೆ, ಹೂಗುಚ್ಚ ಸ್ಪರ್ಧೆ ಹಾಗೂ ಡೊಳ್ಳು ಕುಣಿತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆ ನಡೆದವು. ಆರ್ಥಿಕವಾಗಿ ಬಲ ನೀಡಲು ಕೆಲವು ಮಹಿಳೆಯರಿಗೆ ಧನಸಹಾಯದ ಚೆಕ್‌ಗಳನ್ನು ವಿತರಿಸಲಾಯಿತು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ ದಿನೇಶ್, ಯೋಜನಾಧಿಕಾರಿ ಜಯಂತಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲಾಜಿ ನೃತ್ಯ ಶಾಲೆಯ ಸಂಸ್ಥಾಪಕಿ ಶಿಲ್ಪಿ ಅನೂಪ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಭಾವತಿ, ವಲಯ ಮೇಲ್ವಿಚಾರಕ ಎನ್.ದಿನೇಶ್, ಆರೋಗ್ಯ ಶಿಕ್ಷಣಾಧಿಕಾರಿ ಕೆ. ಪದ್ಮಾವತಿ, ವೀರಶೈವ ಕಲ್ಯಾಣ ಮಂಟಪದ ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನಪ್ಪ ಮೇಸ್ಟ್ರು, ಮುಖಂಡರಾದ ಸುಧಾ ಶಿವಪ್ರಸಾದ್, ಉಮೇಶ್ ಉಡುಗಣಿ, ಭರಮಗೌಡ ಹಾಗೂ ಸಂಘದ ಜ್ಞಾನ ವಿಕಾಸ ಸದಸ್ಯರು ಇದ್ದರು.