ಎಸ್ಸಿ, ಎಸ್ಟಿ ನಿಮಗದ ಜಿಲ್ಲಾ ವ್ಯವಸ್ಥಾಪಕಿ ಅಮಾನತು

| Published : Dec 08 2024, 01:17 AM IST

ಎಸ್ಸಿ, ಎಸ್ಟಿ ನಿಮಗದ ಜಿಲ್ಲಾ ವ್ಯವಸ್ಥಾಪಕಿ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮದಡಿಯಲ್ಲಿ 2008ರಲ್ಲಿಯೇ ಹಂಚಿಕೆ ಮಾಡಲಾದ ಭೂಮಿಯನ್ನು ಇದುವರೆಗೂ ವಶಪಡಿಸಿಕೊಂಡು ಫಲಾನುಭವಿಗೆ ನೀಡದೆ ಇರುವ ಪ್ರಕರಣದಲ್ಲಿ ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ ಅವರನ್ನು ಅಮಾನತು ಮಾಡಲು ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ

-ಸಭೆಗೆ ಬಾರದ ಪೌರಾಯುಕ್ತರಿಗೆ ನೋಟಿಸ್

-ಮೊಬೈಲ್‌ನಲ್ಲಿ ಮಜಾ ಮಾಡುತ್ತಿದ್ದವರು ತರಾಟೆಗೆ

-ಮಳೆ ಬಂದು ಕೊಚ್ಚಿಹೋಗುವ ಬೆಳೆಗೂ ಪರಿಹಾರ ನೀಡಲು ಕೇಂದ್ರಕ್ಕೆ ಕೋರಿಕೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮದಡಿಯಲ್ಲಿ 2008ರಲ್ಲಿಯೇ ಹಂಚಿಕೆ ಮಾಡಲಾದ ಭೂಮಿಯನ್ನು ಇದುವರೆಗೂ ವಶಪಡಿಸಿಕೊಂಡು ಫಲಾನುಭವಿಗೆ ನೀಡದೆ ಇರುವ ಪ್ರಕರಣದಲ್ಲಿ ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ ಅವರನ್ನು ಅಮಾನತು ಮಾಡಲು ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವರು ಖಡಕ್ ಸೂಚನೆ ನೀಡಿದ್ದಾರೆ.

ಶಾಸಕ ರಾಘವೇಂದ್ರ ಹಿಟ್ನಾಳ ವಿಷಯ ಪ್ರಸ್ತಾಪ ಮಾಡಿ, 2008ರಲ್ಲಿಯೇ ಎಸ್ಸಿ,ಎಸ್ಟಿ ನಿಗಮದಿಂದ ಹಂಚಿಕೆ ಮಾಡಲಾದ ಭೂಮಿಯನ್ನು ಫಲಾನುಭವಿಗೆ ಇದುವರೆಗೂ ಹಂಚಿಕೆ ಮಾಡಿಲ್ಲ, ಇನ್ನು ದುರಂತ ಎಂದರೇ ಹಂಚಿಕೆ ಮಾಡಿದ ಭೂಮಿಗೆ ಹಣ ಪಡೆದು, ವಿಂಡ್ ಪವರ್‌ಗೆ ಮತ್ತೆ ಮಾರಾಟ ಮಾಡಿದ್ದಾರೆ. ಇಷ್ಟಾದರೂ ಯಾವ ಅಧಿಕಾರಿಯೂ ಕ್ರಮವಹಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಚಿವ ಶಿವರಾಜ ತಂಗಡಗಿ, ಇದನ್ನು ಸಹಿಸಿಕೊಂಡು ಇರುವುದಕ್ಕೆ ಸಾಧ್ಯವೇ ಇಲ್ಲ. ಈ ಕುರಿತು ಕ್ರಮವಾಗಬೇಕು. 2008ರಿಂದ ಇಲ್ಲಿಯವರೆಗೂ ಯಾಕೆ ಸಮಸ್ಯೆಯನ್ನು ಹಾಗೆ ಬಿಡಲಾಗಿದೆ. ಈಗಿದ್ದ ಅಧಿಕಾರಿಗಳು ವಿಷಯ ಗೊತ್ತಾದ ಮೇಲೆಯೂ ತಪ್ಪಿತಸ್ಥರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಈಗಿರುವ ಅಧಿಕಾರಿಯನ್ನು ಅಮಾನತು ಮಾಡಿ, ಹಾಗೆ ಈ ಹಿಂದೆ ಇದ್ದ ಅಧಿಕಾರಿಯ ಕುರಿತು ಕ್ರಮವಹಿಸಲು ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು. ಅಷ್ಟೇ ಅಲ್ಲಾ, ಕೇವಲ ಇದೊಂದೇ ಪ್ರಕರಣ ಅಲ್ಲ, ಈ ರೀತಿ ಭೂಮಿ ಹಂಚಿಕೆ ಮಾಡಿದ್ದರೂ ಫಲಾನುಭವಿಗೆ ನೀಡದೆ ಇರುವ ಕುರಿತು ಕೂಡಲೇ ಪರಿಶೀಲನೆ ಮಾಡಿ ಎಂದು ತಿಳಿಸಿದರು.

ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ರ ಭಾವಚಿತ್ರ ಹಾಕುವಂತೆ ಸೂಚಿಸಿದರು. ಅಷ್ಟೇ ಅಲ್ಲಾ, ಬಸವಣ್ಣನ ವಚನಗಳ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲಿಯೇ ಪ್ರತಿ ಹಳ್ಳಿಗೂ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಸಭೆಗೆ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.

ಸಭೆಗೆ ಬಾರದೆ ಇರುವ ಕೊಪ್ಪಳ ನಗರಸಭೆಯ ಪೌರಾಯುಕ್ತರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಲಾಯಿತು. ಆದರೆ, ಕೊಪ್ಪಳ ನಗರಸಭೆ ಇರುವುದರಿಂದ ಅವರು ಬಂದಿಲ್ಲ ಎಂದಾಗ ತ್ರೈಮಾಸಿಕ ಸಭೆ ಇರುವುದು ಗಮನಕ್ಕೆ ಇಲ್ಲವೇ ಎಂದು ಪ್ರಶ್ನೆ ಮಾಡಿದರು. ಅಷ್ಟೇ ಅಲ್ಲಾ, ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದ್ದಾಗ ಅದೇ ದಿನ ಬೇರೆ ಯಾವುದೇ ಸಭೆ ಆಯೋಜನೆ ಮಾಡದಿರುವಂತೆ ಕಟ್ಟುನಿಟ್ಟಾಗಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಸಚಿವ ತಂಗಡಗಿ ತಾಕೀತು ಮಾಡಿದರು.

ಅಧಿಕಾರಿಗಳು ಮೊಬೈಲ್‌ನಲ್ಲಿ ಮಜಾ ಮಾಡುವುದನ್ನು ಕೈಬಿಡಬೇಕು. ಸಭೆಯಲ್ಲಿ ಮೊಬೈಲ್ ನೋಡಿಕೊಳ್ಳುತ್ತಾ ಕುಳಿತರೇ ಸುಮ್ಮನೇ ಬಿಡುವುದಿಲ್ಲ ಎಂದು ಇಬ್ಬರು ಅಧಿಕಾರಿಗಳ ಗುರುತಿಸಿ, ಎದ್ದು ನಿಲ್ಲಿಸಿ ವಾರ್ನಿಂಗ್ ಮಾಡಿದರು.

ಕೇಂದ್ರಕ್ಕೆ ಪ್ರಸ್ತಾವನೆ:ಜಿಲ್ಲೆಯಲ್ಲಿ ಈ ಬಾರಿ ಅಕಾಲಿಕ ಮಳೆಯಿಂದಾಗಿ ರಾಶಿ ಮಾಡುತ್ತಿದ್ದ ಭತ್ತ ಕೊಚ್ಚಿಕೊಂಡು ಹೋಗಿದೆ. ಆದರೆ, ಕೇಂದ್ರದ ವಿಪ್ಪತ್ತು ಪರಿಹಾರ ನಿಯಮಾನುಸಾರ ಇದಕ್ಕೆ ಅವಕಾಶ ಇಲ್ಲ. ಕೇವಲ ಹೊಲದಲ್ಲಿ ಬೆಳೆ ಹಾನಿ ಮಾಡಿದರೇ ಮಾತ್ರ ಪರಿಹಾರ ನೀಡಲು ಅವಕಾಶ ಇದೆ. ಆದರೆ, ರಾಶಿ ಮಾಡಿದ ಮೇಲೆ ಹಾನಿಯಾದರೇ ಅವಕಾಶ ಇಲ್ಲ. ಹೀಗಾಗಿ ಈ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಸೂಚಿಸಿದರು. ಜೊತೆಗೆ ಈ ಬಗ್ಗೆ ಗಮನಹರಿಸುವಂತೆ ಸಂಸದ ರಾಜಶೇಖರ ಹಿಟ್ನಾಳ ಅವರಿಗೂ ಮನವಿ ಮಾಡಿದರು.

ಶಾಸಕ ದೊಡ್ಡನಗೌಡ ಪಾಟೀಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಸೇರಿದಂತೆ ಅನೇಕರು ಇದ್ದರು.