ಸ್ಮಶಾನದಲ್ಲೇ ಅಡುಗೆ, ಊಟ : ಮಾನವ ಬಂಧುತ್ವ ವೇದಿಕೆಯಿಂದ ಜಾಗೃತಿ ಕಾರ್ಯಕ್ರಮ

| Published : Dec 08 2024, 01:17 AM IST

ಸ್ಮಶಾನದಲ್ಲೇ ಅಡುಗೆ, ಊಟ : ಮಾನವ ಬಂಧುತ್ವ ವೇದಿಕೆಯಿಂದ ಜಾಗೃತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಸ್ಮಶಾನದಲ್ಲಿ ಪರಿವರ್ತನಾ ದಿನಾಚರಣೆ ಆಚರಿಸಲಾಯಿತು. ಸ್ಮಶಾನದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಮೂಢನಂಬಿಕೆಯಿಂದ ಹೊರಬರಬೇಕು ಎಂದು ಕರೆ ನೀಡಲಾಯಿತು.

ಕನ್ನಡ ಪ್ರಭ ವಾರ್ತೆ ಮಡಿಕೇರಿ

ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣದ ಅಂಗವಾಗಿ ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ವತಿಯಿಂದ ಶನಿವಾರಸಂತೆಯ ಮಾದ್ರೆ ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಮೌಢ್ಯ ಮುಕ್ತ ಸಮಾಜಕ್ಕಾಗಿ ಪರಿವರ್ತನಾ ದಿನಾಚರಣೆಯನ್ನು ಆಚರಿಸಲಾಯಿತು. ಸ್ಮಶಾನದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಮೂಢ ನಂಬಿಕೆಯಿಂದ ಎಲ್ಲರೂ ಹೊರ ಬರಬೇಕೆಂದು ಕರೆ ನೀಡಲಾಯಿತು.

ಮಾದ್ರೆ ಗ್ರಾಮದ ಸ್ಮಶಾನ ಜಾಗದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ದನ್, ಮಾನವ ಬಂಧುತ್ವ ವೇದಿಕೆಯು ಕರ್ನಾಟಕದಲ್ಲಿ ವೈಚಾರಿಕ ಕ್ರಾಂತಿಯನ್ನು ಎಲ್ಲರಲ್ಲಿ ಮೂಡಿಸುತ್ತಿದೆ ಎಂದರು.

ಅಜ್ಞಾನದಿಂದ ವಿಜ್ಞಾನದ ಕಡೆಗೆ ಹಾಗೂ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸುವ ಸಲುವಾಗಿ ರಾಜ್ಯಾದ್ಯಂತ ಕಾರ್ಯಕ್ರಮ ನಡೆಯುತ್ತಿದೆ. ಜನಪ್ರತಿನಿಧಿ ಸತೀಶ್ ಜಾರಕಿಹೊಳಿ ಅವರು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ವೈಚಾರಿಕ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಮಾನವ ಬಂಧುತ್ವ ವೇದಿಕೆಯಿಂದಲೂ ಮಾದ್ರೆ ಗ್ರಾಮದ ಸ್ಮಶಾನ ಜಾಗದಲ್ಲಿ ಅಡುಗೆ ಮಾಡಿ ಊಟ ಮಾಡುವ ಮೂಲಕ ಮೌಢ್ಯಾಚರಣೆಯಿಂದ ಎಲ್ಲರೂ ಹೊರ ಬರಬೇಕು ಎಂದು ಕರೆ ನೀಡುತ್ತಿರುವುದಾಗಿ ತಿಳಿಸಿದರು.

ವೇದಿಕೆಯ ತಾಲೂಕು ಸಂಚಾಲಕ ಎಂ.ಎಸ್.ವೀರೇಂದ್ರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ.ಕೆ.ಮಂಜುನಾಥ, ಸದಸ್ಯರಾದ ಪಿ.ಎಂ.ವಿಶ್ವ, ಅರುಣ್ ಕುಮಾರ್, ಡೀಲಾಕ್ಷ, ಗುರುಪ್ರಸಾದ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.