ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಇದು ಜಾತಿ ಗಣತಿ ಅಲ್ಲ, ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಗಣತಿ. ಇದನ್ನು ವೈಜ್ಞಾನಿಕವಾಗಿಯೇ ನಡೆಸಲಾಗುತ್ತಿದೆ. ಹೀಗಾಗಿ ಜನತೆ ಅನಗತ್ಯ ಗೊಂದಲ ಪಡಬೇಕಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಲ್ಲಿ ಭಾನುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸರ್ಕಾರ ಯಾರಿಗೆ ಅನುಕೂಲ ಮಾಡಬೇಕು? ನಿಜವಾದ ಹಿಂದುಳಿದವರು ಯಾರು? ಯಾರಿಗೆ ಹೆಚ್ಚಿನ ಸಹಾಯ ಮಾಡಬೇಕು? ಸವಲತ್ತು ಕೊಡಬೇಕಾದರೆ ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಅಂಕಿಅಂಶಗಳನ್ನು ಸುಪ್ರೀಂ ಕೋರ್ಟ್ ಕೇಳುತ್ತದೆ. ಹಾಗಾಗಿ ಈ ಸಮೀಕ್ಷೆ ನಡೆಸಲಾಗುತ್ತದೆ.ಆದರೆ ಇದಕ್ಕೆ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ವೀರಶೈವ, ಲಿಂಗಾಯತಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಅದು ಅವರ ವೈಯಕ್ತಿಕ ವಿಚಾರ. ಹಿಂದಿನಿಂದಲೂ ಒಮ್ಮೆ ಅದು ಪ್ರತ್ಯೇಕ ಧರ್ಮ, ಒಮ್ಮೆ ಅದು ಪ್ರತ್ಯೇಕ ಧರ್ಮ ಅಲ್ಲ, ವೀರಶೈವ ಲಿಂಗಾಯತ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದರು. ರಾಜ್ಯ ಸರ್ಕಾರ ನಡೆಸುತ್ತಿರುವ ಈ ಗಣತಿಯಲ್ಲಿ ಜಾತಿ ಹೆಸರಲ್ಲಿ ಏನೇನು ನಮೂದಿಸಬೇಕು ಎಂದು ಜಾತಿ ಮುಖಂಡರು ಹೇಳುತ್ತಿರುವುದು ಸರಿಯೇ ಇದೆ. ಈ ಮಧ್ಯೆ ಗಣತಿ ಬಗ್ಗೆ ಗೊಂದಲ ಮೂಡಿಸಿ ಲಾಭ ಪಡೆಯಬೇಕು ಎಂದು ಹವಣಿಸುವ ತಂಡವೇ ಇದೆ ಎಂದರು. ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಹಿಂದು ಕ್ರೈಸ್ತರು ಇದ್ದಾರೆ ಎಂದು ತಿಳಿಯಲಾಗಿದೆ. ಅದು ಹಾಗೆ ಇರಬಾರದು, ಮತಾಂತರಗೊಂಡರೆ, ಅವರು ಆ ಧರ್ಮಕ್ಕೆ ಸೇರ್ಪಡೆಯಾದಂತೆ. ಹಿಂದು ಜಾತಿ, ಧರ್ಮ ಎಂದು ಪ್ರತ್ಯೇಕ ಹುಡುಕುವುದರಲ್ಲಿ ಅರ್ಥ ಇಲ್ಲ. ಈ ವಿಚಾರವನ್ನು ನಾನು ಕೂಡ ಹಿಂದುಳಿದ ವರ್ಗಗಳ ಆಯೋಗದ ಗಮನಕ್ಕೆ ತಂದಿದ್ದೇನೆ ಎಂದರು. ಹಿಂದೆ ಬಿಜೆಪಿಯೇ ಒಪ್ಪಿಕೊಂಡಿತ್ತು:ಹಿಂದು ಧರ್ಮದಲ್ಲಿ ಸುಮಾರು 47 ಹಿಂದು ಉಪ ಜಾತಿಗಳನ್ನು ಕ್ರೈಸ್ತ ಧರ್ಮದ ಜೊತೆ ಕಾಂಗ್ರೆಸ್ ಜೋಡಿಸಿಲ್ಲ. ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗ ಮಾಡಿದ ಪಟ್ಟಿಯನ್ನು ಬಿಜೆಪಿಯೇ ಒಪ್ಪಿಕೊಂಡಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಾಂತರಾಜು ಸಮಿತಿ ವರದಿಯನ್ನು ಜಯಪ್ರಕಾಶ್ ಹೆಗ್ಡೆಗೆ ವಹಿಸಿದ್ದು ಬಿಜೆಪಿಯವರೇ. ನಂತರವೇ ಆಯೋಗ ಅಧ್ಯಕ್ಷ ಜಯಪ್ರಕಾಶ್ ಅವರು ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಮೀಸಲಾತಿಯನ್ನು ಬಿಜೆಪಿ ಸರ್ಕಾರವೇ ಜಾರಿಗೊಳಿಸಿತ್ತು. ಆಗ ವಿರೋಧಿಸದವರು ಈಗ ವಿರೋಧಿಸುತ್ತಿರುವುದು ಯಾಕೆ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಢೀರ್ ದೆಹಲಿ ಭೇಟಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಆಗಾಗ ದೆಹಲಿಗೆ ಹೋಗುತ್ತಿರುತ್ತಾರೆ. ವಾರದಲ್ಲಿ ಮೂರ್ನಾಲ್ಕು ಸಲ ದೆಹಲಿಗೆ ಹೋಗುತ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))