ಸಿಎಂ ಸಿದ್ದು ಆಪ್ತ ಐವನ್‌ಗೆ ಎರಡನೇ ಬಾರಿ ಪರಿಷತ್‌ ಟಿಕೆಟ್‌

| Published : Jun 03 2024, 12:30 AM IST

ಸಿಎಂ ಸಿದ್ದು ಆಪ್ತ ಐವನ್‌ಗೆ ಎರಡನೇ ಬಾರಿ ಪರಿಷತ್‌ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಐವನ್‌ಗೆ ಮೊದಲ ಬಾರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲಾಯಿತು. ಪರಿಷತ್‌ ಸದಸ್ಯನಾಗಿ 2020ರ ವರೆಗೆ ಐವನ್‌ ಡಿಸೋಜಾ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಆತ್ಮಭೂಷಣ್

ಕನ್ನಡಪ್ರಭ ವಾರ್ತೆ ಮಂಗಳೂರು

ಶಾಸಕರಿಂದ ಆಯ್ಕೆಯಾಗುವ ವಿಧಾನ ಪರಿಷತ್‌ ಸ್ಥಾನಕ್ಕೆ ದ.ಕ.ಜಿಲ್ಲೆಯಿಂದ ಈ ಬಾರಿ ಕೆಪಿಸಿಸಿ ಉಪಾಧ್ಯಕ್ಷ, ವಕ್ತಾರ ಐವನ್‌ ಡಿಸೋಜಾ ಅವರಿಗೆ ಕ್ರಿಶ್ಚಿಯನ್‌ ಕೋಟಾದಲ್ಲಿ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಕರಾವಳಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ. ಆದರೆ ಬಿಜೆಪಿಯಲ್ಲಿ ಈ ಬಾರಿಯೂ ಕರಾವಳಿ ಪ್ರಾತಿನಿಧ್ಯ ವಂಚಿತವಾಗಿದೆ.

ದ.ಕ.ಜಿಲ್ಲೆಯಿಂದ ಆಯ್ಕೆಯಾದ ವಿಧಾನ ಪರಿಷತ್ ಹಾಲಿ ಸದಸ್ಯ ಹರೀಶ್‌ ಕುಮಾರ್‌ ಅವರ ಅವಧಿ ಮುಕ್ತಾಯಗೊಳ್ಳುತ್ತಲೇ ಮತ್ತೆ ಇಲ್ಲಿನವರಿಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಪ್ರಾದೇಶಿಕವಾರು ನ್ಯಾಯ ಒದಗಿಸಿದೆ ಎಂಬ ಹರ್ಷ ಕಾಂಗ್ರೆಸ್‌ ವಲಯದಿಂದ ವ್ಯಕ್ತವಾಗಿದೆ.

ಬಿಜೆಪಿಯಲ್ಲಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬಹುದು ಎಂದು ಹೇಳಲಾಗಿತ್ತು. ಕೊನೆಗಳಿಗೆಯಲ್ಲಿ ಟಿಕೆಟ್‌ ಮಲೆನಾಡು ಸೀಮೆಯ ಪಾಲಾಗಿತ್ತು. ಆ ನಂತರ ನಡೆಯುವ ಈ ಪರಿಷತ್‌ ಚುನಾವಣೆಯಲ್ಲಿ ಕೂಡ ದ.ಕ, ಉಡುಪಿ ಅಥವಾ ಉತ್ತರ ಕನ್ನಡ ಜಿಲ್ಲೆಗೆ ಟಿಕೆಟ್‌ ನಿರೀಕ್ಷಿಸಲಾಗಿತ್ತು. ಈ ಬಾರಿಯೂ ಪರಿಷತ್‌ಗೆ ಕರಾವಳಿ ಬಿಜೆಪಿಗೆ ಟಿಕೆಟ್‌ ದೊರೆತಿಲ್ಲ.

ಐವನ್‌ಗೆ 2ನೇ ಬಾರಿ ಅವಕಾಶ: 2014ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಐವನ್‌ ಡಿಸೋಜಾ 2020ರಲ್ಲಿ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೆ ಪರಿಷತ್‌ ಸದಸ್ಯರಾಗಿ ಮುಂದುವರಿಯಲು ಪ್ರಯತ್ನ ನಡೆಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. 2021ರಲ್ಲಿ ಮತ್ತೆ ಪ್ರಯತ್ನಿಸಿದಾಗಲೂ ಅವಕಾಶ ಸಿಕ್ಕಿರಲಿಲ್ಲ. 2022ರಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಆಯ್ಕೆ ವೇಳೆಯೂ ಪ್ರಯತ್ನ ಕೈಗೂಡಲಿಲ್ಲ. 2023ರ ಅಸೆಂಬ್ಲಿ ಚುನಾವಣೆಯಲ್ಲಿ ಮೂಡುಬಿದಿರೆ ಅಥವಾ ಮಂಗಳೂರು ದಕ್ಷಿಣದಿಂದ ಟಿಕೆಟ್‌ಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್‌ ಪ್ರಯತ್ನ ಪ್ರಯೋಜನವಾಗಲಿಲ್ಲ.

ಐವನ್‌ ಎಐಸಿಸಿ ಕಾರ್ಯದರ್ಶಿಯಾಗಿ, ಕೇರಳ ಉಸ್ತುವಾರಿಯಾಗಿ ನಾಲ್ಕು ತಿಂಗಳು ಕಾಲ ಕಾರ್ಯನಿರ್ವಹಿಸಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಸ್ಕ್ರೀನಿಂಗ್‌ ಸಮಿತಿ ಸದಸ್ಯರಾಗಿದ್ದರು.

2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಐವನ್‌ಗೆ ಮೊದಲ ಬಾರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲಾಯಿತು. ಪರಿಷತ್‌ ಸದಸ್ಯನಾಗಿ 2020ರ ವರೆಗೆ ಐವನ್‌ ಡಿಸೋಜಾ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಐವನ್‌ ಡಿಸೋಜಾ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಪರಿಷತ್‌ನ ಮುಖ್ಯ ಸಚೇತಕರಾಗಿಯೂ ಅನುಭವಿ. ಸುಮಾರು 20ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳ ಮುಂದಾಳುವಾಗಿ ಹೆಸರು ಮಾಡಿದ್ದಾರೆ.................

ಹಿಂದೆ ಪರಿಷತ್‌ಗೆ ನಾಮನಿರ್ದೇಶನಗೊಂಡಿದ್ದೆ. ಚುನಾವಣೆ ಬಂದಾಗ ಪ್ರತಿ ಬಾರಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದೇನೆ. ಆದರೂ ಪಕ್ಷ ನಿಷ್ಠೆ ಬಿಡಲಿಲ್ಲ, ಸಕ್ರಿಯನಾಗಿ ತೊಡಗಿಸಿಕೊಂಡಿದ್ದೆ. ಈ ಬಾರಿ ಪಕ್ಷ ನಾಯಕರು ನನ್ನ ಪಕ್ಷ ಸೇವೆ ಗುರುತಿಸಿ ಟಿಕೆಟ್‌ ನೀಡಿದ್ದಾರೆ.

-ಐವನ್‌ ಡಿಸೋಜಾ, ಪರಿಷತ್‌ ಅಭ್ಯರ್ಥಿ