ಸಾರಾಂಶ
ಹಾನಗಲ್ಲ: ಶಿಕ್ಷಣ ಕೇವಲ ಅಂಕ ಗಳಿಕೆಯ ಮೂಟೆಯಲ್ಲ. ಭಾರತದ ಭವಿಷ್ಯ ತರಗತಿ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂಬ ಅರಿವು ಶಿಕ್ಷಕರಾಗುವವರಿಗೆ ಇರಬೇಕು ಎಂದು ಹಿರೇಕೆರೂರಿನ ಬಿಆರ್‌ಟಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ಚನ್ನಗೌಡರ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರ ಸಂಘ ಹಾಗೂ ವಿವಿಧ ವಿಷಯವಾರು ಸಂಘಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೊಠಾರಿ ಆಯೋಗದ ಆಶಯ ಈಡೇರಿಕೆಯಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯ. ಸಾಧಕರಿಗೆ ಸಾಧನೆಯ ಕನಸಿದ್ದರೆ ಸಾಲದು. ಸಾಧನೆಗೆ ತಕ್ಕ ಬದ್ಧತೆ ಇರಬೇಕು. ಆತ್ಮವಿಶ್ವಾಸ, ಕಠಿಣ ಪರಿಶ್ರಮ ಸಾಧಕನಿಗೆ ಮೆಟ್ಟಿಲುಗಳಾಗಿವೆ. ಜ್ಯೋತಿ ತಾ ಬೆಳಗದೆ ಇನ್ನೊಂದು ಜ್ಯೋತಿ ಬೆಳಗದು. ಜ್ಞಾನ ಗಳಿಸದ ವ್ಯಕ್ತಿ ಇನ್ನೊಬ್ಬನಿಗೆ ಜ್ಞಾನ ನೀಡಲಾರ. ಈ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾಗಬೇಕಿದೆ. ಬದಲಾದ ವ್ಯವಸ್ಥೆಯಲ್ಲಿ ಪ್ರಾಯೋಗಿಕತೆಗೆ ಹೆಚ್ಚು ಮಹತ್ವ ನೀಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಅತಿ ಅವಶ್ಯ. ಕಲಿಕೆಗೆ ಅಥವಾ ವ್ಯಕ್ತಿ ಸಾಧನೆಗೆ ಜನ್ಮ ನಕ್ಷತ್ರಗಳಾಗಲಿ, ಹಸ್ತರೇಖೆಗಳಾಗಲಿ ಕಾರಣವಲ್ಲ. ಎರಡೂ ಕೈ ಇಲ್ಲದ ವ್ಯಕ್ತಿಯು ಸಹ ಸಾಧನೆಯ ಉತ್ತುಂಗಕ್ಕೆ ಏರಬಲ್ಲ ಎಂದರು. 2021- 23ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯದ ಬಿಇಡಿ ಪರೀಕ್ಷೆಯಲ್ಲಿ ನಮ್ಮ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಬಂದ ಕಾವ್ಯಾ ಮಂಜುನಾಥ ನಿಂಗೋಜಿ, ದ್ವಿತೀಯ ಸ್ಥಾನ ಪಡೆದ ಜ್ಯೋತಿ ತಳವಾರ, ತೃತೀಯ ಸ್ಥಾನ ಪಡೆದ ಅರ್ಪಿತಾ ಬಾವಿಕಟ್ಟಿ ಅವರಿಗೆ ದತ್ತಿ ನಿಧಿಯಿಂದ ಸನ್ಮಾನಿಸಲಾಯಿತು. ಡಾ. ವಿಶ್ವನಾಥ ಬೊಂದಾಡೆ ದತ್ತಿನಿಧಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಿತೇಂದ್ರ ಜಿ.ಟಿ., ಡಾ. ಹರೀಶ ಟಿ.ಟಿ., ಡಾ. ಪ್ರಕಾಶ ಹುಲ್ಲೂರ, ಡಾ. ಪ್ರಕಾಶ ಜಿ.ವಿ., ಪ್ರೊ. ದಿನೇಶ್ ಆರ್, ಪ್ರೊ. ಮಹೇಶ್ ಅಕ್ಕಿವಳ್ಳಿ, ಎಸ್.ಸಿ. ವಿರಕ್ತಮಠ, ಎಂ.ಎಂ. ನಿಂಗೋಜಿ, ಮಂಜುನಾಥ ಪರಸಿಕ್ಯಾತಿ, ಜಗದೀಶ ನಿಂಬಕ್ಕನವರ, ಮಾಲತೇಶ ಜಡೆದ, ಎಲ್.ಎಫ್., ಹಾನಗಲ್ಲ ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರ ಕಂದಕೂರ, ಮಹಿಳಾ ಪ್ರತಿನಿಧಿ ಶೃತಿ ರಾಠೋಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಡಾ. ರುದ್ರೇಶ ಬಿ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನ್ನಪೂರ್ಣಾ ಸುಣಗಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪಾರ್ವತಿ ತಳವಾರ ಸ್ವಾಗತಿಸಿದರು. ಡಾ. ರಾಘವೇಂದ್ರ ಮಾಡಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಆಶಾ ವಿ.ಎಸ್. ಸಂಗಡಿಗರು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನೀಡಿದರು. ದಿವ್ಯಾ ಸುತಾರಾ ಮತ್ತು ಲತಾ ಚಿಲಕವಾಡ ನಿರೂಪಿಸಿದರು. ವೆಂಕಟೇಶ ಆರ್. ವಂದಿಸಿದರು. ಇಂದು ಪೂರ್ವಭಾವಿ ಸಭೆ
ರಾಣಿಬೆನ್ನೂರು: ಮಹಾರಾಷ್ಟ್ರದ ಪುಂಡಾಟಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಮಾ. 22ರಂದು ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಕುರಿತು ಚರ್ಚಿಸಲು ಎಲ್ಲ ರೈತಪರ, ಕನ್ನಡಪರ, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಮತ್ತು ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಮಾ. 21ರಂದು ಬೆಳಗ್ಗೆ 10ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಪ್ರಗತಿಪರ ಚಿಂತಕರು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ತಮ್ಮ ಸಲಹೆ, ಸೂಚನೆ ನೀಡಬೇಕು ಎಂದು ಸ್ವಾಭಿಮಾನ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.