ಕಾರ್ಕಳ: ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದರ ಜತೆಗೆ, ಆಸ್ತಿ-ಪಾಸ್ತಿಯ ರಕ್ಷಣೆ ಹಾಗೂ ಕಾನೂನು ನೆರವು ಪಡೆಯುವ ವಿಧಾನಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್ ಹೇಳಿದರು.ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯ ಭಾಗವಾಗಿ ಶುಕ್ರವಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರು ಕಾನೂನು ಸಮಸ್ಯೆಗಳನ್ನು ಎದುರಿಸಿದಾಗ ಮೌನವಾಗಿರದೆ, ಲಭ್ಯವಿರುವ ಕಾನೂನು ನೆರವು ಹಾಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ತಮ್ಮ ಹಕ್ಕುಗಳ ರಕ್ಷಣೆಗಾಗಿ ಸೂಕ್ತ ಕಾನೂನು ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ರಾವ್ ಎಂ.ವಿ., ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಎಸ್. ಹಾಗೂ ತಾಲೂಕು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ. ಕಮಲಾಕ್ಷ ಕಾಮತ್ ಮುಖ್ಯ ಅತಿಥಿಗಳಾಗಿದ್ದರು.
ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿ ಲೋಲಾಕ್ಷ ಅವರು ಹಿರಿಯ ನಾಗರಿಕರಿಗೆ ಲಭ್ಯವಿರುವ ಕಾನೂನು ನೆರವು, ವಿವಿಧ ಸೌಲಭ್ಯಗಳು ಮತ್ತು ರಿಯಾಯಿತಿಗಳು ಹಾಗೂ ಆಸ್ತಿ-ಪಾಸ್ತಿಯ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತು ನೈಜ ಪ್ರಕರಣಗಳ ಉದಾಹರಣೆಗಳೊಂದಿಗೆ ಮಾಹಿತಿ ನೀಡಿದರು.ನಿವೃತ್ತ ಸಹಾಯಕ ನಿರ್ದೇಶಕ ಎಂ. ನಿರಂಜನ್ ಭಟ್ ಅವರು ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆ–2007ರ ಪ್ರಮುಖ ಅಂಶಗಳು, ಹಿರಿಯ ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಕಾನೂನು ಕ್ರಮಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಮಾಹೆ ಮಣಿಪಾಲದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜಿ. ಅವರು ಸೈಬರ್ ವಂಚನೆಯ ವಿಧಾನಗಳು, ಡಿಜಿಟಲ್ ಯುಗದಲ್ಲಿ ಹಿರಿಯ ನಾಗರಿಕರು ಎದುರಿಸಬಹುದಾದ ಅಪಾಯಗಳು ಹಾಗೂ ಆನ್ಲೈನ್ ವಂಚನೆಗಳಿಂದ ರಕ್ಷಿಸಿಕೊಳ್ಳುವ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಕಾರ್ಕಳ ತಾಲೂಕು ಎಂ.ಆರ್.ಡಬ್ಲ್ಯೂ. ಮಂಜುಳಾ ಸುಭಾಷ್ ಹಾಗೂ ತಾಲೂಕಿನ ಎಲ್ಲ ವಿ.ಆರ್.ಡಬ್ಲ್ಯೂ.ಗಳು ಉಪಸ್ಥಿತರಿದ್ದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾ ಸಹಾಯಕ ಶಿವಾಜಿ ಸ್ವಾಗತಿಸಿದರು. ವಿ.ಆರ್.ಡಬ್ಲ್ಯೂ. ಜಹೀರ್ ವಂದಿಸಿದರು. ಡಿಡಿಆರ್ಸಿ ನೋಡಲ್ ಅಧಿಕಾರಿ ಜಯಶ್ರೀ ನಿರೂಪಿಸಿದರು.