ದಾಸೇಗೌಡ ಸರಗೂರು

ಕನ್ನಡಪ್ರಭ ವಾರ್ತೆ ಸರಗೂರು

ತಾಲೂಕು ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದು, ಮತ್ತೊಂದೆಡೆ ಸರ್ಕಾರದ ಹೊಸ ಆದಾಯ ಮಿತಿ ನಿಯಮದಿಂದಾಗಿ ಬಡವರು ಹಾಗೂ ವಿಕಲಚೇತನರ ಮಾಶಾಸನ ಸ್ಥಗಿತಗೊಂಡು ಕಣ್ಣೀರಿಡುವಂತಾಗಿದೆ.

ಬೆಳಗಿನ ಜಾವ 5:30 ರಿಂದಲೇ ಕ್ಯೂ!

ತಮ್ಮ ಮತ್ತು ಮಕ್ಕಳ ವಿದ್ಯಾಭ್ಯಾಸ, ಮಾಶಾಸನ, ವಾಸಸ್ಥಳ ದೃಢೀಕರಣ ಮುಂತಾದ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ ತಾಲೂಕಿನ ನೂರಾರು ಗ್ರಾಮಗಳಿಂದ ಬರುವ ರೈತರು ಹಾಗೂ ಸಾರ್ವಜನಿಕರು ಬೆಳಗಿನ ಜಾವ 5.30ಕ್ಕೆ ಬಂದು ಕಚೇರಿ ಮುಂಭಾಗ ಕಾದು ಕುಳಿತುಕೊಳ್ಳುತ್ತಿದ್ದಾರೆ. ಬೆಳಗ್ಗೆ 9.30ಕ್ಕೆ ಗೇಟ್ ತೆರೆಯುತ್ತಿದ್ದಂತೆ ನೆಮ್ಮದಿ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗುತ್ತಿದೆ.


ಇಷ್ಟೆಲ್ಲಾ ಕಷ್ಟಪಟ್ಟು ನಿಂತರೂ ನೆಮ್ಮದಿ ಕೇಂದ್ರದಲ್ಲಿ ಒಬ್ಬರೇ ಸಿಬ್ಬಂದಿ ಇರುವುದರಿಂದ ಮತ್ತು ಪದೇ ಪದೇ ಸರ್ವರ್/ ನೆಟ್‌ ವರ್ಕ್ ಕೈಕೊಡುತ್ತಿರುವುದರಿಂದ ಜನರು ವಾರಗಟ್ಟಲೆ ಅಲೆಯುವಂತಾಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ತಕ್ಷಣವೇ ಮತ್ತೊಂದು ಹೆಚ್ಚುವರಿ ಕೌಂಟರ್ ತೆರೆಯುವಂತೆ ಒತ್ತಾಯಿಸಿದ್ದಾರೆ.

ಬಡವರ ಹೊಟ್ಟೆಗೆ ಮಣ್ಣು ಹಾಕಿದ ''''''''32 ಸಾವಿರ ರೂ.'''''''' ಆದಾಯ ಮಿತಿ!

ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ವಾರ್ಷಿಕ ಆದಾಯದ ಮಿತಿಯನ್ನು ಏಕಾಏಕಿ 32,000 ರೂ.ಗಳಿಗೆ ಇಳಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೆ ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಈ ಮಿತಿ 82,000 ರೂ.ಗಳವರೆಗೆ ಇತ್ತು. ಈ ಹೊಸ ನಿಯಮದಿಂದಾಗಿ ಕಳೆದ ಮೂರು ತಿಂಗಳಿಂದ ನಿಜವಾದ ವಿಕಲಚೇತನರು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರು ಮತ್ತು ವಿಧವೆಯರ ತಿಂಗಳ ಮಾಶಾಸನ ಸ್ಥಗಿತಗೊಂಡಿದೆ.

ಅಧಿಕಾರಿಗಳ ಅಸಹಾಯಕತೆ

ಈ ಬಗ್ಗೆ ತಹಶೀಲ್ದಾರ್ ಮೋಹನ್ ಕುಮಾರಿ ಹಾಗೂ ಗ್ರೇಡ್- 2 ತಹಶೀಲ್ದಾರ್ ಪರಶಿವಮೂರ್ತಿ ಅವರನ್ನು ಪ್ರಶ್ನಿಸಿರೆ ಇದು ಕೇವಲ ನಮ್ಮ ತಾಲೂಕಿಗೆ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ಜಾರಿಯಲ್ಲಿರುವ ನಿಯಮ. 32 ಸಾವಿರ ರೂ. ಒಳಗಡೆ ಆದಾಯ ಮಿತಿ ಇರಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕರು ಮೈಸೂರಿನಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು, ಕ್ಷೇತ್ರಕ್ಕೆ ಬಂದು ಕಚೇರಿಗಳ ಸ್ಥಿತಿಯನ್ನು ನೋಡಬೇಕು. ತಿಂಗಳಿಗೆ ಲಕ್ಷಾಂತರ ರೂ. ಸಂಬಳ, ಭತ್ಯೆ ಪಡೆಯುವ ಶಾಸಕರು ವಿಧಾನಸೌಧದಲ್ಲಿ ಈ ''''''''ಆದಾಯ ಮಿತಿ'''''''' ನಿಯಮದ ವಿರುದ್ಧ ಧ್ವನಿ ಎತ್ತಿ ಬಡವರಿಗೆ ನ್ಯಾಯ ಕೊಡಿಸಬೇಕು ಎಂದು ಕೆಆರ್‌ಎಸ್ ಪಕ್ಷದ ಸೈನಿಕ ಮಂಜುನಾಥ್ ಆಗ್ರಹಿಸಿದ್ದಾರೆ.

---

ಕೋಟ್

"ಗ್ಯಾರೆಂಟಿ ಯೋಜನೆಗಳಿಗೆ ಯಾವುದೇ ಆದಾಯ ಮಿತಿ ಇಲ್ಲ ಎನ್ನುವ ಸರ್ಕಾರ, ಸಮಾಜದ ಕಟ್ಟಕಡೆಯ ವಿಕಲಚೇತನರು ಮತ್ತು ವೃದ್ಧರ ಮಾಶಾಸನ ಕಿತ್ತುಕೊಳ್ಳುತ್ತಿದೆ. ರಾಜ್ಯಾದ್ಯಂತ ಸುಮಾರು 18 ಲಕ್ಷ ಜನರ ಸಾಮಾಜಿಕ ಭದ್ರತಾ ಯೋಜನೆಗಳನ್ನು ನಿಲ್ಲಿಸಲಾಗಿದೆ.

- ಸಾಗರೆ ನಾಗರಾಜು, ವಿಕಲಚೇತನ ಹೋರಾಟಗಾರ.

---

ನಾನು ಸಂಪೂರ್ಣ ಅಂಧ. ಮುಂಚೆ 80 ಸಾವಿರ ರೂ. ಆದಾಯ ಪತ್ರ ಇದ್ದಿದ್ದಕ್ಕೆ ಈಗ ಹಣ ನಿಲ್ಲಿಸಿದ್ದಾರೆ. ಕಣ್ಣೇ ಕಾಣದ ನಾನು ಈಗ 32 ಸಾವಿರದ ಆದಾಯ ಪತ್ರ ತರಲು ಎಲ್ಲಿಗೆ ಹೋಗಲಿ? ಮೂರು ತಿಂಗಳಿಂದ ಹಣವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ.

- ಸುರೇಶ್, ಬಿದರಳ್ಳಿ ಗ್ರಾಮ

---

ನನ್ನ ಗಂಡನಿಗೆ ವಯಸ್ಸಾಗಿ ಎದ್ದು ಓಡಾಡಲು ಆಗಲ್ಲ. ನನಗೆ ಒಂದು ಕೈ ಇಲ್ಲ. ಬರುತಿದ್ದ ಮಾಶಾಸನ ನಿಂತುಹೋಗಿದೆ. ಕಚೇರಿಗೆ ಬಂದರೆ 32 ಸಾವಿರ ರೂ. ಆದಾಯ ಪತ್ರ ತನ್ನಿ ಎನ್ನುತ್ತಾರೆ, ನಾನು ಏನು ಮಾಡಲಿ?

- ರಾಜಮ್ಮ, ಹೊಸಕೆರೆ ಸುಂಡ ಗ್ರಾಮ.