ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವುದನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ದಾವೆ ಹೂಡಲು ಹಾಗೂ ಬೀದಿಗಿಳಿದು ಹೋರಾಟ ಮಾಡುವುದಾಗಿ ಪರಿಸರಕ್ಕಾಗಿ ನಾವು, ರೈತ ಸಂಘ ಮತ್ತು ದಲಿತ ಸಂಘಟನೆಗಳು ಘೋಷಿಸಿವೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ದಸರಾದಲ್ಲಿ ಕಂಬಳ ಆಯೋಜನೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದರು. ಹಿಂಪಡೆಯದಿದ್ದರೇ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಾವು ಕಂಬಳ ಕ್ರೀಡೆಯನ್ನು ವಿರೋಧಿಸುತ್ತಿಲ್ಲ. ಬಲತ್ಕಾರವಾಗಿ ಹೇರುವುದಕ್ಕೆ ವಿರೋಧ ಇದೆ. ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ. ಕೋಣಗಳೂ ಇಲ್ಲ. ದಸರಾದಲ್ಲಿ ಸ್ಥಳೀಯ ಕ್ರೀಡೆ, ಸಾಂಸ್ಕೃತಿಕ ಕಲೆಗಳಿಗೆ ಉತ್ತೇಜನ ಕೊಡಬೇಕು. ಜನರ ಭಾವನೆಯನ್ನು ಸರ್ಕಾರ ಗೌರವಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಜನರು ವಿರೋಧಿಸುವುದನ್ನೇ ಸರ್ಕಾರ ಹಠಕ್ಕೆ ಬಿದ್ದವರಂತೆ ಜಾರಿಗೆ ತರುತ್ತದೆ. ಸರ್ಕಾರ ವಾರದೊಳಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳದಿದ್ದರೆ ಬೀದಿಗಿಳಿದು ಅಹಿಂಸಾತ್ಮಕ ಹೋರಾಟದ ಜೊತೆಗೆ ಪ್ರತಿರೋಧ ಒಡ್ಡುತ್ತೇವೆ ಎಂದು ಅವರು ಹೇಳಿದರು.


ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಪ್ರವಾಸೋದ್ಯಮದ ಹೆಸರಿನಲ್ಲಿ ಜನಪದ ಕ್ರೀಡೆ ತುರುಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಕ್ರೀಡೆ ಆಯೋಜಿಸಿ ದುಂದುವೆಚ್ಚ ಮಾಡುವುದು ಸರಿಯಲ್ಲ. ಮಂಗಳೂರು, ಮೂಡಬಿದರೆ ದಸರಾಗಳಲ್ಲಿ ಕಂಬಳ ಆಯೋಜಿಸಬೇಕು ಎಂದರು.

ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ದಸರಾದಲ್ಲಿ ಕಂಬಳ ಆಯೋಜನೆಗೆ ಹಠಬೇಡ. ಕಂಬಳಕ್ಕೆ ಅದರದೇ ಆದ ವೈಶಿಷ್ಟ್ಯ, ಧಾರ್ಮಿಕತೆ ಇದೆ. ಮೈಸೂರಲ್ಲಿ ಕಂಬಳ ಆಯೋಜನೆಗೆ ತುಳುನಾಡಿನ ಜನರೇ ವಿರೋಧ ಮಾಡುತ್ತಿದ್ದಾರೆ. ದಸರಾದಲ್ಲಿ ಕಂಬಳ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಮುಖಂಡರಾದ ಭಾನು ಮೋಹನ್, ಬೆಟ್ಟಯ್ಯ ಕೋಟೆ, ಮ.ಗು. ಸದಾನಂದಯ್ಯ, ಮನ್ಸೂರ್ ಅಹಮದ್, ಹೊರೆಯಾಲ ದೊರೆಸ್ವಾಮಿ, ಸಿಂಧುವಳ್ಳಿ ಅಕ್ಬರ್, ಶಂಭುಲಿಂಗಸ್ವಾಮಿ ಇದ್ದರು.