ಸೇವಾಲಾಲರು ಮೌಢ್ಯ ನಿಗ್ರಹಕ್ಕೆ ಶ್ರಮಿಸಿದ ಸಂತ: ಮೇಯರ್‌ ಶ್ವೇತಾ

| Published : Feb 16 2024, 01:45 AM IST

ಸೇವಾಲಾಲರು ಮೌಢ್ಯ ನಿಗ್ರಹಕ್ಕೆ ಶ್ರಮಿಸಿದ ಸಂತ: ಮೇಯರ್‌ ಶ್ವೇತಾ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾಲಾಲರು ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು.

ಬಳ್ಳಾರಿ: ಸಾಮಾಜಿಕ ಅನಿಷ್ಟಗಳು ಹಾಗೂ ಮೌಢ್ಯಗಳನ್ನು ಹೋಗಲಾಡಿಸಲು ಹಾಗೂ ಜನಸಮುದಾಯಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಸಂತ ಸೇವಾಲಾಲರು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಮೇಯರ್ ಬಿ. ಶ್ವೇತಾ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಹಯೋಗದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಗುರುವಾರ ಜರುಗಿದ ಸಂತ ಸೇವಾಲಾಲ್ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

1739ರಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲರು, ತಮ್ಮ ಅನುಭವಗಳನ್ನು ತತ್ವ ವಿಚಾರಗಳ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದ್ದಾರೆ. ಶಿಕ್ಷಣದ ಮಹತ್ವ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ್ದಾರೆ ಎಂದರು.

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ದಾಖಲಾತಿ ವಿಭಾಗದ ಉಪಮುಖ್ಯ ವೈದ್ಯಾಧಿಕಾರಿ ಡಾ. ಗುರುನಾಥ ಬಿ. ಚವ್ಹಾಣ ಅವರು ವಿಶೇಷ ಉಪನ್ಯಾಸ ನೀಡಿ, ಸೇವಾಲಾಲರು ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು, ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ, ಅರಿಷಡ್ವರ್ಗಗಳನ್ನು ಸುಟ್ಟು ಹಾಕಿ, ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಎಂದು ಸಂತ ಸೇವಾಲಾಲರು ತಿಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪಿಎಚ್‍ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ. ವಸಂತ್ ಕುಮಾರ್ ತಂಡದವರು ಸುಗಮ ಸಂಗೀತಗಳನ್ನು ಪ್ರಸ್ತುತಪಡಿಸಿದರು.

ಉಪಮೇಯರ್ ಬಿ. ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಕೆ. ವೇದಾವತಿ, ತಾರಾನಾಥ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ರವಿ. ಬಿ. ಚೌವ್ಹಾಣ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.

ಸಂಭ್ರಮದ ಮೆರವಣಿಗೆ: ಸಂತ ಸೇವಾಲಾಲ್ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ನಗರದ ಡಾ. ರಾಜ್‍ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದ ಆವರಣದಿಂದ ಆರಂಭಗೊಂಡ ಮೆರವಣಿಗೆಗೆ ಮೇಯರ್ ಬಿ. ಶ್ವೇತಾ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ವಿವಿಧ ಸಾಂಸ್ಕೃತಿಕ ಕಲಾತಂಡಗಳು, ಲಂಬಾಣಿ ಕಸೂತಿಯ ವೇಷ ಧರಿಸಿದ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು.

ಮೆರವಣಿಗೆಯು ಮುನ್ಸಿಪಲ್ ಮೈದಾನದಿಂದ ಆರಂಭವಾಗಿ ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‍ಪೇಟೆ ಪೊಲೀಸ್ ಠಾಣೆ, ತೇರು ಬೀದಿ, ಎಚ್.ಆರ್. ಗವಿಯಪ್ಪ ವೃತ್ತದ ಮಾರ್ಗವಾಗಿ ವಾಲ್ಮೀಕಿ ಭವನದವರೆಗೆ ಸಾಗಿ ಬಂತು.