ಗುಡಿಸಲು ಮುಕ್ತ ಕರ್ನಾಟಕ ನಮ್ಮ ಗುರಿ: ಜಿ.ಪಲ್ಲವಿ

| Published : Feb 12 2025, 12:36 AM IST

ಸಾರಾಂಶ

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗದವರನ್ನು ಮುಖ್ಯವಾಹಿನಿಗೆ ತರಲು ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕ್ ಗಳ ವ್ಯವಸ್ಥಾಪಕರ ಇಚ್ಛಾಶಕ್ತಿಯ ಕೊರತೆಯಿಂದ ಜನರಿಗೆ ತಲುಪುತ್ತಿಲ್ಲ. ಈ ಧೋರಣೆಯನ್ನು ನಿಗಮವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗದವರ ಎಲ್ಲರಿಗೂ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಟೆಂಟ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಮೊದಲ ಆದ್ಯತಾ ಗುರಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಡಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡು ಅಲೆಮಾರಿ ಸಮುದಾಯದವರ ಸಮಸ್ಯೆಗಳನ್ನು ಅವರ ಬಳಿಗೆ ಬಂದು ಆಲಿಸಿ ಪರಿಹರಿಸುವ ಯತ್ನ ಮಾಡುತ್ತಿದ್ದೇನೆ. ಅದೇ ರೀತಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಯ 53 ಅಲೆಮಾರಿ ಜನಾಂಗಗಳು ಹಾಗೂ ಪರಿಶಿಷ್ಟ ಪಂಗಡದ 23 ಅಲೆಮಾರಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಶಿಡ್ಲಘಟ್ಟ ತಾಲೂಕಿನ ಎಚ್.ಕ್ರಾಸ್ ಬಳಿ ವಾಸಿಸುವ ಚನ್ನದಾಸರು ಹಾಗೂ ಹಂದಿಜೋಗಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಬಿದಿರಿನ ಸಲಕರಣೆಗಳನ್ನು ತಯಾರಿಸಿ ಜೀವನ ಸಾಗಿಸುವ ಜನಾಂಗದವರು ಬಹಳ ತೊಂದರೆಗೆ ಸಿಲುಕಿದ್ದು, ಮಹಾರಾಷ್ಟ್ರದಿಂದ ಬಿದಿರನ್ನು ಆಮದು ಮಾಡಿಕೊಂಡು ಬಹಳ ಕಷ್ಟದಿಂದ ವೃತ್ತಿ ಸಾಗಿಸುತ್ತಿದ್ದಾರೆ. ಆ ಸಮುದಾಯವರು ಬಿದಿರು ಉತ್ಪನ್ನವು ಜಿಲ್ಲೆಯಲ್ಲಿ ಸುಗಮವಾಗಿ ದೊರಕುವ ವ್ಯವಸ್ಥೆ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೆಲವೆಡೆ ಅಲೆಮಾರಿ ಜನಾಂಗದವರು ವಾಸಿಸುವಲ್ಲಿ ಅಂಗನವಾಡಿ, ಬಸ್ ನಿಲ್ಧಾಣದ ವ್ಯವಸ್ಥೆಗೆ ಬೇಡಿಕೆ ಸಲ್ಲಿಸಿದ್ದಾರೆ. ಗಂಜಿಕುಂಟೆ ಗ್ರಾಮದಲ್ಲಿ ವಾಸಿಸುವ ಹಕ್ಕಿ ಪಿಕ್ಕಿ ಜನಾಂಗದವರು ತಾವು ಉಳುಮೆ ಮಾಡುತ್ತಿರುವ 414 ಎಕರೆ ಭೂಮಿಯನ್ನು ಹದ್ದುಬಸ್ತು ಮಾಡಿಸಿ ಕೊಡಲು ಕೋರಿದ್ದಾರೆ. ಪೆರೇಸಂದ್ರದ ಬಳಿಯ ದೊಂಬರಪಾಳ್ಯದ ಅಲೆಮಾರಿ ಜನಾಂಗದವರು ಉಳುಮೆ ಮಾಡುತ್ತಿರುವ ಕೃಷಿ ಭೂಮಿಗೆ ದಾಖಲೆಗಳನ್ನು ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಎಲ್ಲಾ ಮನವಿ, ಅಹವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಹ ಪೂರಕವಾಗಿ ಸ್ಪಂದಿಸಿದೆ. ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಹಾರ ಕ್ರಮಕ್ಕೆ ಸ್ಥಳೀಯಾಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಭರವಸೆ ನೀಡಿದರು.

ಅಕ್ರಮ ವಿದ್ಯುತ್ ಬೇಡ:

ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಪ್ರತಿಯೊಬ್ಬರಿಗೂ 200 ಯುನಿಟ್ ಉಚಿತ ವಿದ್ಯುತನ್ನು ನೀಡುತ್ತಿದೆ. ಆದರೆ ಅಲೆಮಾರಿ ಸಮುದಾಯದವರು ವಾಸಿಸುವ ಕೆಲವೆಡೆ ವಿದ್ಯುತ್ ಕಂಬಗಳ ತಂತಿಗಳಿಗೆ ಅಕ್ರಮವಾಗಿ ವೈರ್ ಮೂಲಕ ಸಂಪರ್ಕ ಪಡೆದು ವಿದ್ಯುತ್ ಉಪಯೋಗಿಸುತ್ತಿರುವುದು ಒಳ್ಳೆಯದಲ್ಲ, ಕೆಲವೊಮ್ಮೆ ಪ್ರಾಣ ಅಪಾಯಕ್ಕೆ ಕಾರಣವಾಗಲಿದೆ. ಸಮುದಾಯದವರು ಸಹ ಈ ನಿಟ್ಟಿನಲ್ಲಿ ಜಾಗೃತಿ ಹೊಂದಿ ವಿದ್ಯುತ್ ಸಂಪರ್ಕವನ್ನು ಪಡೆದು ಉಚಿತ ವಿದ್ಯುತ್ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ತಾಕೀತು:

ಸರ್ಕಾರದ ವಿವಿಧ ಯೋಜನೆಗಳಡಿ ಇಲಾಖೆಗಳಿಂದ ಸಾಲ ಸೌಲಭ್ಯ ಮಂಜೂರಾಗಿ ಕೆಲವು ಪ್ರಕರಣಗಳಲ್ಲಿ ವರ್ಷ ಕಳೆದರೂ ಸಹ ಸಾಲ ಸೌಲಭ್ಯ ಫಲಾನುಭವಿಗಳಿಗೆ ಪಾವತಿಸದಿರುವುದು ತಮ್ಮ ನಿರ್ಲಕ್ಷ್ಯವಾಗಿದೆ. ಮುಂದಿನ ಒಂದು ವಾರದ ಒಳಗೆ ಫಲಾನುಭವಿಗಳಿಗೆ ಸಾಲ ಪಾವತಿಯಾಗಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ತಾಕೀತು ಮಾಡಿದರು.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗದವರನ್ನು ಮುಖ್ಯವಾಹಿನಿಗೆ ತರಲು ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕ್ ಗಳ ವ್ಯವಸ್ಥಾಪಕರ ಇಚ್ಛಾಶಕ್ತಿಯ ಕೊರತೆಯಿಂದ ಜನರಿಗೆ ತಲುಪುತ್ತಿಲ್ಲ. ಈ ಧೋರಣೆಯನ್ನು ನಿಗಮವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಸಮಿತಿಯ ಸದಸ್ಯರಿಗೂ ಕ್ಲಾಸ್ :

ಜಿಲ್ಲೆಯಲ್ಲಿ 681 ಕುಟುಂಬಗಳು ಇಂದು ಸಹ ನಿವೇಶನ ರಹಿತರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯ ಯೋಜನೆಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸದಸ್ಯರು ಯಾವ ಕ್ರಮ ತೆಗೆದುಕೊಂಡಿದ್ದೀರಿ. ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನ ರಹಿತ ಅಲೆಮಾರಿ ಜನರಿಗೆ ನಿವೇಶನ ನೀಡಬೇಕು. ಸರ್ಕಾರಿ ಜಮೀನು ಸ್ಥಳೀಯವಾಗಿ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಈ ಸಮುದಾಯದವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸರ್ಕಾರ ಕಾನೂನು ಮಾಡಿದೆ. ಈ ಬಗ್ಗೆ ಯಾವ ಸದಸ್ಯರು ಎಷ್ಟು ಬಾರಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೀರಿ, ಹೋರಾಟ ಮಾಡಿದ್ದೀರಿ. ಇನ್ನಾದರೂ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಣಾಮಕಾರಿಯಾಗಿ ಹೋರಾಟ ಮಾಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.