ಕನ್ನಡಪ್ರಭ ವಾರ್ತೆ ಬೆಂಗಳೂರು
ಶೀಲ ಶಂಕಿಸಿ ತನ್ನ ಪತ್ನಿಯನ್ನು ಕೊಂದು ಬಳಿಕ ಮಗನಿಗೆ ಕರೆ ಮಾಡಿ ತಿಳಿಸಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಂಜೀವಿನಗರದ ನಿವಾಸಿ ದೇವಮ್ಮ (55) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತಳ ಪತಿ ಕುಮಾರ್ (66) ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಸಮಸ್ಯೆ ಸಂಬಂಧ ದಂಪತಿ ಮಧ್ಯೆ ಮಂಗಳವಾರ ರಾತ್ರಿ ಜಗಳವಾಗಿದೆ. ಆಗ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಂದು ಮಗನಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಮಿಳುನಾಡು ಮೂಲದ ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳಿಗೆ ವಿವಾಹವಾಗಿದ್ದು, ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಮಗನ ಕುಟಂಬ ಸಹ ಪೋಷಕರಿಂದ ಪ್ರತ್ಯೇಕವಾಗಿ ವಾಸವಾಗಿತ್ತು. ಸಂಜೀವಿನಿ ನಗರದಲ್ಲಿದ್ದ ತಮ್ಮ ಸ್ಪಂತ ಮನೆಯಲ್ಲಿ ಕುಮಾರ್ ಹಾಗೂ ದೇವಮ್ಮ ವಾಸವಾಗಿದ್ದರು.ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ವಿಭಾಗದಲ್ಲಿ ದೇವಮ್ಮ ಹಾಗೂ ಗಾರೆ ಕೆಲಸನಾಗಿ ಕುಮಾರ್ ದುಡಿಯುತ್ತಿದ್ದರು. ಸಣ್ಣಪುಟ ವಿಚಾರಗಳಿಗೆ ದಂಪತಿ ಮಧ್ಯೆ ಜಗಳವಾಗುತ್ತಿತ್ತು. ತನ್ನ ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡಿದ್ದ ಕುಮಾರ್, ಇದೇ ವಿಷಯವಾಗಿ ದೇವಮ್ಮ ಜತೆ ಗಲಾಟೆ ಮಾಡುತ್ತಿದ್ದ. ಅಂತೆಯೇ ಮಂಗಳವಾರ ರಾತ್ರಿ ಸಹ ಜಗಳವಾಗಿದೆ. ಆಗ ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಕುಮಾರ್ ಹತ್ಯೆಗೈದಿದ್ದಾನೆ. ಈ ಕೃತ್ಯ ಎಸಗಿದ ನಂತರ ತನ್ನ ಮಗನಿಗೆ ಕರೆ ಮಾಡಿ ಆತ ತಿಳಿಸಿದ್ದಾನೆ. ನಂತರ ಮೃತನ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.