ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ರೈತರ ಬದುಕಿನ ಬೆನ್ನೆಲುಬಾಗಿರುವ ಶಿಂಷಾ ನದಿ ಬಲದಂಡೆ ನಾಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಎಡದಂಡೆ ನಾಲೆಗೆ ಎಸ್.ಎಂ.ಕೃಷ್ಣರ ಹೆಸರು ನಾಮಕರಣ ಮಾಡಲು ಕಾವೇರಿ ನೀರಾವರಿ ನಿಗಮ ನಿಯಮಿತ (ಎನ್‌ಸಿಸಿ ಎಲ್) ನಿರ್ಣಯಿಸಿದೆ.

ಈ ಬಗ್ಗೆ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಎಸ್.ಎಂ.ಕೃಷ್ಣ ಅವರ ಹೆಸರನ್ನು ನಾಲೆಗೆ ಇಡುವುದು ಕೇವಲ ಹೆಸರಿನ ಬದಲಾವಣೆಯಲ್ಲ. ಅದು ಕೃಷಿಗೆ ನೀಡುವ ಗೌರವ, ರೈತರ ಶ್ರಮಕ್ಕೆ ಸಲ್ಲಿಸುವ ಮಾನ್ಯತೆ ಮತ್ತು ಕರ್ನಾಟಕದ ಅಭಿವೃದ್ಧಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವಾಗಿದೆ ಎಂದು ಶಾಸಕದ್ವಯರಾದ ಕೆ.ಎಂ.ಉದಯ್ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಗೂಳಿಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದರು.

ಅದರಂತೆ ಕಳೆದ ವಾರ ನಡೆದ ಕಾವೇರಿ ನೀರಾವರಿ ನಿಗಮ ನಿಯಮಿತದ ಮಂಡಳಿ ಸಭೆಯಲ್ಲಿ ಹೆಸರು ನಾಮಕರಣ ಮಾಡಲು ಅನುಮೋದನೆ ಸಿಕ್ಕಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶೀಘ್ರವೇ ಅಧಿಕೃತವಾಗಿ ಈ ವಿಚಾರವನ್ನು ಪ್ರಕಟಿಸಲಿದ್ದಾರೆ.

ನೀರಾವರಿ ಕ್ಷೇತ್ರದಲ್ಲಿ ದೂರದೃಷ್ಟಿಯ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆರೆಗಳು, ಅಣೆಕಟ್ಟುಗಳು ಮತ್ತು ನಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯ ಪ್ರಗತಿಗೆ ಶ್ರಮಿಸಿದ್ದಾರೆ. ಇದರ ಸ್ಮರಣಾರ್ಥ ಶಿಂಷಾ ಬಲದಂಡೆ ನಾಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಲು ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.


ಎಡದಂಡೆ ನಾಲೆ, ಅಂದಿನ ಪ್ರಜಾಪ್ರತಿನಿಧಿ ಸಭೆ ಸದಸ್ಯರಾದ ಹಿರಿಯ ಮುತ್ಸದ್ದಿ ಎಸ್.ಸಿ.ಮಲ್ಲಯ್ಯರ ರೈತ ಕಾಳಜಿಯಿಂದ ನಿರ್ಮಾಣವಾಯಿತು. ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಕರ್ನಾಟಕದ ಅಭಿವೃದ್ಧಿಗೆ, ವಿಶೇಷವಾಗಿ ನೀರಾವರಿ ಮತ್ತು ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಹೀಗಾಗಿ ಎಡದಂಡೆ ನಾಲೆಗೆ ಎಸ್.ಎಂ.ಕೃಷ್ಣ ಅವರ ಹೆಸರಿಡಲು ತೀರ್ಮಾನಿಸಲಾಗಿದೆ.

ತಗ್ಗಹಳ್ಳಿ ಅಣೆಕಟ್ಟೆಯಿಂದ 21 ಕಿ.ಮೀ. ಉದ್ದವಿರುವ ಬಲದಂಡೆ ನಾಲೆಯು ಕೀಳಘಟ್ಟ, ಸೀನಪ್ಪನ ದೊಡ್ಡಿ, ಎನ್. ಕೋಡಹಳ್ಳಿ, ನಿಲುವಾಗಿಲು, ಮುದಿಗೆರೆ, ಮಾರಸಿಂಗನಹಳ್ಳಿ, ಹೊಸಕೆರೆ, ಕೊತ್ತನಹಳ್ಳಿ, ಬಾಪುರ ದೊಡ್ಡಿ, ಚಾಮನಹಳ್ಳಿ ಗ್ರಾಮಗಳ 3250 ಎಕರೆಗೂ ಅಧಿಕ ಕೃಷಿಭೂಮಿಗೆ ನೀರು ಒದಗಿಸುತ್ತಿದೆ.

ಎಡದಂಡೆ ನಾಲೆಯು 37 ಕಿ.ಮಿ.ಉದ್ದವಿದ್ದು, ಮಾದಪ್ಪನ ಕೊಪ್ಪಲು, ದೊಡ್ಡ ಅಂಕನಹಳ್ಳಿ, ಚಿಕ್ಕ ಅಂಕನಹಳ್ಳಿ, ಅಡಗನಹಳ್ಳಿ, ತೋಬಿನಕೆರೆ, ತೊರೆಶೆಟ್ಟಿಹಳ್ಳಿ, ಹನುಮಂತಪುರ, ಎರಗನಹಳ್ಳಿ, ಕದಲಿಪುರ, ಹುಳಗನಹಳ್ಳಿ, ಯಮ್ಮನಹಳ್ಳಿ, ಸೋಮನಹಳ್ಳಿ, ಕೋಡಳ್ಳಿ, ತೈಲೂರು, ಸೀನನದೊಡ್ಡಿ, ಆಲೂರು, ನೀಲಕಂಠನಹಳ್ಳಿ, ಹಾಗಲಹಳ್ಳಿ, ಕಬ್ಬಾರೆ ಗ್ರಾಮಗಳ 4250 ಎಕರೆಗೂ ಅಧಿಕ ಪ್ರದೇಶಗಳಿಗೆ ನೀರು ಒದಗಿಸುತ್ತಿದೆ. ಇದರಿಂದ ಭತ್ತ, ರಾಗಿ, ಕಬ್ಬು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಹತ್ತಾರು ಕೆರೆಕಟ್ಟೆಗಳು ತುಂಬುವ ಮುಖಾಂತರ ಈ ಭಾಗದ ಅಂತರ್ಜಲ ವೃದ್ಧಿಯಾಗುತ್ತಿದೆ.