ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಂಘದ ಅಧ್ಯಕ್ಷ ಅಶೋಕ ಪೈ
ಕನ್ನಡಪ್ರಭ ವಾರ್ತೆ ಭಟ್ಕಳಶಿರಾಲಿಯ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ರಜತ ಮಹೋತ್ಸವದ ಸಂದರ್ಭದಲ್ಲಿ ಶಿರಾಲಿಯ ಪರಿಜ್ಞಾಶ್ರಮ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲಾದ ಬ್ಯಾಂಕಿನ ನೂತನ ಸ್ವಂತ ಕಟ್ಟಡವನ್ನು ಫೆ. ೨೫ರಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಅಶೋಕ ಪೈ ಹೇಳಿದರು.
ಶಿರಾಲಿಯಲ್ಲಿರುವ ಮಾರುತಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ೧೯೯೯ರಲ್ಲಿ ಶಿರಾಲಿಯಲ್ಲಿ ಆರಂಭವಾದ ನಮ್ಮ ಸಂಸ್ಥೆ ಇಂದು ೨೬ ವರ್ಷಗಳನ್ನು ಪೂರೈಸಿ ಪ್ರತಿಷ್ಠಿತ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದ ೪ ಶಾಖೆಗಳು ಲಾಭದಲ್ಲಿದ್ದು, ಶೇರುದಾರ ಸದಸ್ಯರಿಂದ ₹೧೧೬ ಕೋಟಿ ಠೇವಣಿ ಸಂಗ್ರಹಿಸಿ, ₹೧೦೪ ಕೋಟಿ ಸಾಲ ವಿತರಣೆ ಮಾಡಲಾಗಿದೆ. ಮಾರ್ಚ್ ೨೦೨೫ರ ಅಂತ್ಯಕ್ಕೆ ಸಂಘ ₹೨.೫೦ ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಕಾರ್ಯವೈಖರಿ ಗಮನಿಸಿ ಬೆಂಗಳೂರಿನ ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ವತಿಯಿಂದ ೨ ಬಾರಿ ಉತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಂಘವು ಕಳೆದ ೨೫ ವರ್ಷಗಳಲ್ಲಿ ಕೂಡಿಟ್ಟ ₹೭ ಕೋಟಿ ಕಟ್ಟಡ ನಿಧಿಯಲ್ಲಿ ಶಿರಾಲಿಯ ಶ್ರೀ ಪರಿಜ್ಞಾನಾಶ್ರಮ ಮಾರ್ಗದಲ್ಲಿ ೧೨ ಗುಂಟೆ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಈಗ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ ಎಂದರು.ಕಟ್ಟಡ ಉದ್ಘಾಟನೆಯನ್ನು ಫೆ. ೨೫ರಂದು ಸಂಜೆ ೫ ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಸಂಘದ ಹಿರಿಯ ಸದಸ್ಯ ನರೇಂದ್ರ ನಾಯಕ ಮಾತನಾಡಿದರು. ಸಂಘದ ಉಪಾಧ್ಯಕ್ಷ ಉಮೇಶ ಕಾಮತ್, ನಿರ್ದೇಶಕರಾದ ನಾಗೇಶ ಪೈ, ರವೀಂದ್ರ ಪ್ರಭು, ವಾಮನ ಕಾಮತ್, ಅನಂತ ಕಾಮತ್, ವಿದ್ಯಾ ಮಹಾಲೆ, ನಮಿತಾ ಕಾಮತ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶಾನಭಾಗ, ವ್ಯವಸ್ಥಾಪಕ ಪ್ರಸನ್ನ ಪ್ರಭು ಉಪಸ್ಥಿತರಿದ್ದರು.