ಆಸ್ತಿ ದಾನ ಮಾಡಿ ಸಮಾಜಕ್ಕೆ ಶಿರಸಂಗಿ ಲಿಂಗರಾಜರು ಮಾದರಿ

| Published : Jan 11 2024, 01:31 AM IST

ಆಸ್ತಿ ದಾನ ಮಾಡಿ ಸಮಾಜಕ್ಕೆ ಶಿರಸಂಗಿ ಲಿಂಗರಾಜರು ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡು ಕಂಡ ಅಪ್ರತಿಮ ತ್ಯಾಗವೀರ ಸಿರಸಂಗಿ ಲಿಂಗರಾಜ ಅವರ 164ನೇ ಜಯಂತಿಯಲ್ಲಿ ಬಾಲಶೇಖರ ಬಂದಿ ಮಾತನಾಡಿ ಅವರ ಸೇವೆಯನ್ನು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬಡಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಸರ್ವರೂ ಸಹಬಾಳ್ವೆಯಿಂದ ಸುಖ ಜೀವನ ನಡೆಸಬೇಕೆಂಬ ಉದ್ದೇಶದಿಂದ ಶಿರಸಂಗಿ ಲಿಂಗರಾಜ ದೇಸಾಯಿ ಅವರು ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನ ಮಾಡಿ ನಾಡಿಗೆ ಮಾದರಿಯಾಗಿದ್ದಾರೆ ಎಂದು ಮೂಡಲಗಿಯ ನಿವೃತ ಗ್ರಂಥಪಾಲಕ ಬಾಲಶೇಖರ ಬಂದಿ ಹೇಳಿದರು.

ಸ್ಥಳೀಯ ಕೆ.ಎಲ್.ಇ ಕಾಲೇಜಿನ ಸಭಾ ಭವನದಲ್ಲಿ ಕೆಎಲ್ಇ ಸಂಸ್ಥೆ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕೆಎಲ್ಇ ಅಂಗಸಂಸ್ಥೆಗಳ ವತಿಯಿಂದ ನಾಡು ಕಂಡ ಅಪ್ರತಿಮ ತ್ಯಾಗವೀರ ಸಿರಸಂಗಿ ಲಿಂಗರಾಜ ಅವರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಬೆನ್ನೆಲುಬು ರೈತ ಎಂಬುದನ್ನು ಮನಗಂಡಿದ್ದ ಲಿಂಗರಾಜರು ತಮ್ಮ 150 ಎಕರೆ ಹೊಲದಲ್ಲಿ ಕೃಷಿ ತರಬೇತಿ ಶಾಲೆ ಸ್ಥಾಪಿಸಿ, ಭೂ ಅಭಿವೃದ್ಧಿ ನೀರಾವರಿ ಯೋಜನೆಗಳಿಗಾಗಿ ಹಲವಾರು ಕೆರೆಗಳನ್ನು ಕಟ್ಟಿಸಿದ್ದಾರೆ. ಅವರ ದೂರದೃಷ್ಟಿಗೆ ಹಿಡಿದ ಕನ್ನಡಿ. ಅವರ ದೂರದೃಷ್ಟಿತ್ವದಿಂದಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭವಾದವು. ಕೃಷಿಯನ್ನೇ ನಂಬಿದ್ದ ಲಿಂಗಾಯತ ಸಮುದಾಯವು ಶಿಕ್ಷಣದತ್ತ ಒಲವು ತೋರುವಂತೆ ಮಾಡಿದರು. ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಆ ಕಾಲದಲ್ಲಿಯೇ ಸಹಕಾರ ತತ್ವದ ಅಡಿ ಕೃಷಿಕರಿಗಾಗಿ ಮಾರುಕಟ್ಟೆ ನಿರ್ಮಾಣ, ಹೀಗೆ ಹತ್ತು ಹಲವು ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಹೇಳಿದರು.

ಪ್ರಾಚಾರ್ಯ ಎಸ್.ಐ ಕುಂದಗೋಳ ಮಾತನಾಡಿ, ಸಿರಸಂಗಿ ಲಿಂಗರಾಜರು ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಅವರು ಎಲ್ಲಾ ಆಸ್ತಿ ದಾನ ಮಾಡಿದರು. ಅಪರೂಪದ ಸಾಧಕರಲ್ಲಿ ಇವರು ಕೂಡ ಒಬ್ಬರು. ಲಿಂಗರಾಜರು ವಿದ್ಯಾದಾನ ಮಾಡಿ ಸರಸ್ವತಿ ಮಾನಸ ಪುತ್ರರಾದರು ಎಂದರು.

ನಂತರ ಪ್ರಾಚಾರ್ಯ ಕೆ.ಎಂ ಅವರಾಧಿ ಮಾತನಾಡಿ, ಲಿಂಗರಾಜರ ಮೃತ್ಯುಪತ್ರದಲ್ಲಿದ್ದಂತೆ 1906ರ ಆಗಸ್ಟ್ ತಿಂಗಳಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಉನ್ನತಿ ಮತ್ತು ಶಿಕ್ಷಣಾಭಿವೃದ್ಧಿಗಾಗಿ ನವಲಗುಂದ ಶಿರಸಂಗಿ ಟ್ರಸ್ಟ್ ಸ್ಥಾಪಿಸಲಾಯಿತು. ಆರು ಲಕ್ಷ ರು. ಬಂಡವಾಳದೊಂದಿಗೆ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರೆಗೆ ಹತ್ತಾರು ಸಾವಿರ ಬಡ ವಿದ್ಯಾರ್ಥಿಗಳು ಇದರ ಸಹಾಯ ಪಡೆದಿದ್ದಾರೆ ಎಂದರು.

ಈ ಟ್ರಸ್ಟ್ ಈಗಲೂ ಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮುಂದುವರಿಸಿದೆ. ಇದರ ಸಹಾಯ ಪಡೆದ ಪ್ರಮುಖರಲ್ಲಿ ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್‌.ಕಂಠಿ, ರತ್ನಪ್ಪ ಕುಂಬಾರ ಸೇರಿ ಇನ್ನೂ ಅನೇಕ ಮಹನೀಯರಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಢಪಳಾಪುರ, ಎಲ್.ಬಿ.ತುಪ್ಪದ, ಬಿ.ಎನ್.ಅರಿಕೇರಿ, ಎಸ್.ಎಸ್. ಅಂಗಡಿ, ಎ.ಆರ್. ಚವ್ಹಾಣ ಎಲ್ಲ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.