ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ವಿಶೇಷವಾಗಿ ಶಿವನ ದೇವಾಲಯಗಳನ್ನು ಬಣ್ಣದ ದೀಪಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಭಕ್ತರ ದಂಡೇ ನೆರೆದಿತ್ತು.ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು. ಶಿವನ ದರ್ಶನ ಪಡೆದ ಭಕ್ತರು ಭಕ್ತಿಯ ಭಾವದಲ್ಲಿ ಮಿಂದೆದ್ದರು. ಅರಕೆರೆಯ ಶಿವನ ದೇವಸ್ಥಾನದಲ್ಲಿ ಮುಂಜಾನೆ ಶಿವನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳ ವೈಭವ ನಡೆಯಿತು. ವಿಶೇಷ ಪೂಜೆ, ಪುನಸ್ಕಾರ ಮತ್ತು ಬಿಲ್ವಪತ್ರೆ, ತುಂಬೆ ಅರ್ಪಣೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಭಕ್ತರಿಗೆ ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಲ್ಲಿ ತುಂಗಾ ನದಿಯಲ್ಲಿ ಸ್ನಾನ ಮಾಡಿ ನಂತರ ಶಿವನ ದರ್ಶನ ಮಾಡಲಾಗುತ್ತದೆ. ಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರುತ್ತಾರೆ. ರಸ್ತೆಯಲ್ಲಿ ಹಗ್ಗ ಕಟ್ಟಿ ಸಾಲಿನಲ್ಲಿ ಶಿವನ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಷ್ಟು ಜನ ಇಲ್ಲಿ ಸೇರುತ್ತಾರೆ. ಹಾಗಾಗಿ, ಅರಕೆರೆ ಶಿವನ ದೇವಾಲಯದ ಶಿವರಾತ್ರಿ ಐತಿಹಾಸಿಕ ಮಹತ್ವ ಪಡೆದಿದೆ. ಹಬ್ಬದ ಪ್ರಯುಕ್ತ ಈ ದಾರಿಯಲ್ಲಿ ಸಾಗುವ ಬಸ್ ಸಂಚಾರವನ್ನು ಕೂಡ ಬೇರೆಡೆಗೆ ವರ್ಗಾಯಿಸಲಾಗಿದೆ.ಭಕ್ತರು ಬಿಸಿಲನ್ನು ಲೆಕ್ಕಿಸದೇ ಉದ್ದದ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಗರದ ಎಲ್ಲ ದೇವಾಲಯಗಳಲ್ಲಿ ಭಕ್ತರ ಜಂಗುಳಿ ಕಂಡುಬಂದಿತು. ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಶಿವನ ದೇಗುಲಗಳಲ್ಲದೇ, ಎಲ್ಲ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ, ಅಭಿಷೇಕ ನಡೆಯಿತು.
ವಿನೋಬ ನಗರದ ಶಿವಾಲಯದಲ್ಲಿ ವಿಶೇಷವಾಗಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಗುಂಪು ಗುಂಪಾಗಿ ಪೂಜೆಗೆ ಬರುತ್ತಿರುವ ದೃಶ್ಯ ಕಂಡುಬಂತು. ಮಹಿಳೆಯರು ಅತ್ಯಂತ ಸಡಗರದಿಂದ ಮತ್ತು ಶ್ರದ್ಧಾಭಕ್ತಿಯಿಂದ ಶಿವನ ಆರಾಧಿಸುವ ದೃಶ್ಯ ಸಾಮಾನ್ಯವಾಗಿತ್ತು.ಅಬ್ಬಲಗೆರೆ ಸಮೀಪದ ಈಶ್ವರವನದಲ್ಲಿ ಶಿವರಾತ್ರಿ ಆಚರಿಸಲಾಯಿತು. ರುದ್ರಾಭಿಷೇಕ, ಭಜನೆ, ಪ್ರವಚನ, ಶಿವಸ್ತುತಿ ಮುಂತಾದ ಕಾರ್ಯಕ್ರಮಗಳು ಬೆಳಗ್ಗೆ 7 ಗಂಟೆಯಿಂದಲೇ ನಡೆದವು. ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೋಟೆ ಭೀಮೇಶ್ವರ ದೇವಾಲಯದಲ್ಲಿ ವಿಶೇಷವಾಗಿ ಶಿವನ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಈಶ್ವರನ ದರ್ಶನ ಪಡೆದು ಪುನೀತರಾದರು. ನದಿಯ ದಂಡೆ ಮೇಲೆ ಈಶ್ವರ ದೇವಾಲಯ ಇರುವುದು ಇಲ್ಲಿನ ವಿಶೇಷವಾಗಿದೆ. ಭಕ್ತರಿಗೆ ಪಾನಕ ಮತ್ತು ಕೋಸಂಬರಿ ಹಂಚಲಾಯಿತು.ದೇಗುಲಗಳಲ್ಲಿ ವಿವಿಧ ಕಾರ್ಯಕ್ರಮ:
ವೀರಶೈವ ಕಲ್ಯಾಣ ಮಂದಿರದ ಶಿವನ ದೇವಾಲಯ, ಜೈಲ್ ಆವರಣದಲ್ಲಿರುವ ಉಮಾ ಮಹೇಶ್ವರ, ಬಸವನಗುಡಿಯ ಈಶ್ವರ ದೇವಾಲಯ, ರವೀಂದ್ರ ನಗರದ ಶಿವನ ಮೂರ್ತಿ, ತುಂಗಾ ತೀರದ ಅರಕೇಶ್ವರ ದೇವಾಲಯ, ಗಾಂಧಿ ಬಜಾರಿನ ಬಸವೇಶ್ವರ ದೇವಾಲಯ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯ, ಬಿ.ಎಚ್. ರಸ್ತೆಯ ಮೈಲಾರೇಶ್ವರ, ಬಿ.ಬಿ. ರಸ್ತೆಯ ಭವಾನಿ ಶಂಕರ ದೇವಾಲಯದಲ್ಲಿ, ಆದಿಚುಂಚನಗಿರಿ ದೇವಾಲಯ, ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾ ಮಂದಿರ, ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು, ಭಜನೆ ಆಯೋಜಿಸಲಾಗಿತ್ತು. ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಭಕ್ತಿಗೀತೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಹಬ್ಬದ ಅಂಗವಾಗಿ ಹಲವು ಕಡೆಗಳಲ್ಲಿ ವಿವಿಧ ಸಂಘಟನೆಗಳು ಸಾರ್ವಜನಿಕರು, ದೇವಾಲಯ ಸಮಿತಿಯವರು ಪಾನಕ, ಕೋಸಂಬರಿ, ಮಜ್ಜಿಗೆ ಸೇರಿದಂತೆ ಪಾನೀಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದರು. ಪ್ರಸಾದವನ್ನು ಕೂಡ ನೀಡಲಾಗಿತ್ತು.
ಹಬ್ಬದ ಅಂಗವಾಗಿ ಕಲ್ಲಂಗಡಿ ಹಣ್ಣು, ಬನಾಸ್ಪತ್ರೆ, ಕರಬೂಜ ಮೊದಲಾದ ಹಣ್ಣುಗಳ ಖರೀದಿ ಜೋರಾಗಿತ್ತು. ಇವುಗಳೊಂದಿಗೆ ಹೂವು, ಪೂಜಾ ಸಾಮಗ್ರಿ ಹಾಗೂ ವಿವಿಧ ಹಣ್ಣುಗಳ ಮಾರಾಟವೂ ಜೋರಾಗಿತ್ತು. ಮೂರು ದಿನ ಸಾಲಾಗಿ ರಜೆ ಬಂದಿರುವುದರಿಂದ ಹೊರ ಊರುಗಳಲ್ಲಿ ನೆಲೆಸಿರುವವರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿರುವುದರಿಂದ ಕೆಎಸ್‍ಆರ್‌ಟಿಸಿ, ಖಾಸಗಿ ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು.ಹಬ್ಬದ ನಿಮಿತ್ತ ನಗರದಲ್ಲೆಡೆ ಹಾಗೂ ದೇವಸ್ಥಾನಗಳ ಸಮೀಪ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಕೂಡ ಹಮ್ಮಿಕೊಳ್ಳಲಾಗಿತ್ತು.
- - - ಬಾಕ್ಸ್-1ಈಶ್ವರವನದಲ್ಲಿ ಶಿವರಾತ್ರಿ ಉತ್ಸವಅಬ್ಬಲಗೆರೆಯ ಈಶ್ವರವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟತೆಗಳಿಂದ ಕೂಡಿದ ಶಿವರಾತ್ರಿ ಉತ್ಸವಕ್ಕೆ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ದಕ್ಷಿಣ ಪ್ರಾಂತ ಕಾರ್ಯದರ್ಶಿ, ಶಿವಮೊಗ್ಗ ಶಾಖೆಯ ಡಾ.ಶ್ರೀಧರ್ ಚಾಲನೆ ನೀಡಿದರು. ಇದೇ ಸಂಸ್ಥೆ ಸಹಯೋಗದಲ್ಲಿ ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್, ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಸಹ ನಡೆಯಿತು.
ಡಾ.ಶ್ರೀಧರ್ ಶಿಬಿರ ಉದ್ಘಾಟಿಸಿ ಮಾತನಾಡಿ, ಪಂಚ ಶಿವತತ್ವಗಳಲ್ಲಿ ಒಂದೆನಿಸಿದ ಪರೋಪಕಾರಾರ್ಥವಾಗಿ ನಡೆಯುತ್ತಿರುವ ಶಿಬಿರದಲ್ಲಿ ತಮ್ಮ ಆರೋಗ್ಯ ಸುಧಾರಣೆಗಾಗಿ ಶಿವಧ್ಯಾನದೊಂದಿಗೆ ವೈದ್ಯಕೀಯ ಸೇವೆ ಪಡೆಯಬೇಕು ಎಂದು ತಿಳಿಸಿದರು.ವೈದ್ಯ ಡಾ.ಶ್ರೀನಿವಾಸ್ ಮಾತನಾಡಿ, ಶಿವರಾತ್ರಿಯಂದು ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಭಕ್ತಾದಿಗಳು ರಕ್ತದಾನ ಮಾಡುವ ಮೂಲಕ ಶಿವನ ಕೃಪೆಗೆ ಪಾತ್ರರಾಗುವುದರ ಜೊತೆಗೆ ನಾಲ್ವರ ಪ್ರಾಣ ಕಾಪಾಡಬಹುದು ಎಂದರು.
ಈಶ್ವರವನದ ನಿರ್ಮಾತೃ ಎಂ.ವಿ. ನಾಗೇಶ್ ಮಾತನಾಡಿ, ಪ್ರಕೃತಿಯಿಂದ ನಾವು ಪಡೆದಿರುವ ಸಕಲವೂ ಸೇರಿದಂತೆ ಜೀವಮಾನವಿಡೀ ತೀರಿಸಲಾರದಂತ ಋಣವನ್ನು ನಾವು ಹೊತ್ತಿದ್ದೇವೆ. ಈ ಋಣಭಾರ ತೀರಿಸುವ ಪ್ರಯತ್ನದ ಭಾಗವಾಗಿ ಈಶ್ವರ ವನದಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳಾಗಿವೆ. ಜನರಲ್ಲಿ ಜಾಗೃತಿ ಮೂಡಿಸುವ ಧೃಷ್ಟಿಯಿಂದ ಭಕ್ತಾದಿಗಳಿಗೆ ಪರಿಸರ ಸಂರಕ್ಕಿಸುವ ಶಿವಸಂಕಲ್ಪ ಮಾಡಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದ ಶತರಕ್ತದಾನಿ ಧರಣೇಂದ್ರ ದಿನಕರ್, ಡಾ.ದಿನಕರ್, ರಂಗಕರ್ಮಿ ಕಾಂತೇಶ್ ಕದರಮಂಡಲಗಿ, ನಾಗರಾಜ್ ಶೆಟ್ಟರ್, ಪ್ರಥಮ ಮಹಿಳಾ ರಕ್ತದಾನಿ ಕವಿತಾ, ವಿಜಯಕುಮಾರ್ ಮತ್ತಿತರರು ಇದ್ದರು.
- - - ಬಾಕ್ಸ್-2 ಮಹಾಶಿವರಾತ್ರಿ ಪ್ರಯುಕ್ತ ಶಿವಮೊಗ್ಗದ ಪುರಾಣ ಪ್ರಸಿದ್ಧ ಹರಕೆರೆ ಗ್ರಾಮದ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿತ್ತು. ತುಂಗಾನದಿ ದಡದಲ್ಲಿರುವ ಹರಕೆರೆಯ ಪ್ರಸಿದ್ಧ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆನಿಂದಲೇ ರುದ್ರಾಭಿಷೇಕ, ಶಿವ ಕಲ್ಪೋಕ್ತ ಪೂಜೆ, ಬಿಲ್ವಪತ್ರೆ ಆರ್ಚನೆ, ಭಕ್ತರ ಅಭೀಷ್ಟೆಯಂತೆ ವಿಶೇಷ ಪೂಜೆಗಳನ್ನು ಶಿವಭಕ್ತರು ನೇರವೇರಿಸಿದರು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವನ ಮೂರ್ತಿಯ ದರ್ಶನ ಪಡೆದರು.ರಾಮೇಶ್ವರ ದೇವಾಲಯ ಅವರಣದಲ್ಲಿ 36 ಅಡಿ ಎತ್ತರದ ಶಿವನ ಮೂರ್ತಿ, ಬೃಹತ್ ಶಿವನ ಮೂರ್ತಿಯ ಕೆಳಗೆ ಮಾನಸ ಸರೋವರವನ್ನು ಲಿಂಗದ ಆಕೃತಿಯಲ್ಲಿ ನಿರ್ಮಾಣ, ಸುತ್ತಲೂ ಶಿವನ ಗುಣಗಾನ ಮಾಡುತ್ತಿರುವ ಗಣೇಶ, ಸುಬ್ರಮಣ್ಯ, ಪಾರ್ವತಿ, ಚಂಡಿಕೇಶ್ವರ, ಭೃಂಗಿ ಹಾಗೂ ಸಪ್ತಋಷಿಗಳ ವಿಗ್ರಹಗಳು ಶಿವಲೋಕದ ಸೌಂದರ್ಯವನ್ನು ಹೆಚ್ಚಿಸಿವೆ.
- - - -8ಎಸ್‌ಎಂಜಿಕೆಪಿ01:ಶಿವಮೊಗ್ಗ ವಿನೋಬನಗರದ ಶಿವಾಲಯ ದೇವಸ್ಥಾನದಲ್ಲಿ ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. -8ಎಸ್‌ಎಂಜಿಕೆಪಿ02:
ಶಿವಮೊಗ್ಗ ವಿನೋಬನಗರದ ಶಿವಾಲಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. -8ಎಸ್‌ಎಂಜಿಕೆಪಿ03:ಶಿವಮೊಗ್ಗ ವಿನೋಬ ನಗರದ ಶಿವಾಲಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.