ಸಾರಾಂಶ
ಬ್ಯಾಡಗಿ: ಶಿವರಾತ್ರಿ ಅಂಗವಾಗಿ ಶುಕ್ರವಾರ ಪಟ್ಟಣದ ವಿವಿಧ ದೇವಸ್ಥಾನ ಹಾಗೂ ಮಂದಿರಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಕೈಗೊಳ್ಳುವ ಮೂಲಕ ಎಲ್ಲೆಡೆ ಸಂಭ್ರಮ ಸಡಗರ ಕಂಡುಬಂದಿತು.
ಇಲ್ಲಿನ ಸಿದ್ದೇಶ್ವರ, ವೀರಭದ್ರೇಶ್ವರ, ಆಂಜನೇಯ, ನಿತ್ಯಾನಂದ ಧ್ಯಾನಮಂದಿರ, ಸಂಗಮೇಶ್ವರ, ರೇಣುಕಮಂದಿರ, ಸಾಯಿಮಂದಿರ, ಅಯ್ಯಪ್ಪ ದೇವಸ್ಥಾನ, ದಾನಮ್ಮದೇವಿ, ಸೋಮೇಶ್ವರ, ಬಸವೇಶ್ವರ, ಆನಂದೇಶ್ವರ, ಗುತ್ತೆಮ್ಮದೇವಿ, ಶನೀಶ್ವರ, ಎಲ್ಲಮ್ಮದೇವಿ ಹಾಗೂ ಬಲಮುರಿ ಗಣಪತಿ ದೇವಸ್ಥಾನಗಳಿಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಅರ್ಪಿಸಿದರು.ಬೆಳಗ್ಗೆಯಿಂದಲೇ ಮಹಿಳೆಯರು ಪಟ್ಟಣದ ವಿವಿಧ ಓಣಿಗಳ ದೇವಸ್ಥಾನಗಳ ಮುಂದೆ ಧಾರ್ಮಿಕ ಸಂಕೇತ ಸಾರುವ ಬೃಹತ್ ಆಕಾರದಲ್ಲಿ ರಂಗೋಲಿ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು. ಮಹಿಳೆಯರು ಗುಂಪು ಗುಂಪಾಗಿ ಹಣ್ಣುಹೂವುಗಳ ತಟ್ಟೆಹಿಡಿದು ದೇವಸ್ಥಾನಗಳಿಗೆ ತೆರಳಿದರು. ಇಲ್ಲಿನ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಜಂಗಮ ವಟುಗಳು ಆಹ್ವಾನಿಸಿದ ಭಕ್ತರ ಮನೆಗಳಿಗೆ ತೆರಳಿ ಪಾದಪೂಜೆ, ಶಿವಪೂಜೆಯಲ್ಲಿ ತೊಡಗಿದ್ದರು. ಎಲ್ಲ ದೇವಸ್ಥಾನಗಳಿಗೆ ತೆರಳಿ ವಿಶೇಷ ಅಭಿಷೇಕ ಕೈಗೊಂಡರು. ಸಿದ್ದೇಶ್ವರ ದೇವಸ್ಥಾನ ಹಾಗೂ ನಿತ್ಯಾನಂದ ಧ್ಯಾನಮಂದಿರ, ಬ್ರಹ್ಮಕುಮಾರಿ ಮಂದಿರಗಳಲ್ಲಿ ರಾತ್ರಿಯಿಡಿ ಭಕ್ತಿಸಂಗೀತ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ತಾಲೂಕಿನ ಪುಣ್ಯಕ್ಷೇತ್ರಗಳಾದ ಕದರಮಂಡಲಗಿ ಆಂಜನೇಯ ಸ್ವಾಮಿ, ಗುಡ್ಡದಮಲ್ಲಾಪುರ ಮೂಕಪ್ಪಸ್ವಾಮಿಗಳ ಮಠ, ಕಾಗಿನೆಲೆ ಆದಿಕೇಶವ, ಹಿರೇನಂದಿಹಳ್ಳಿ ಬಸವಣ್ಣ, ಕಲ್ಲೇದೇವರ ಕಲ್ಮೇಶ್ವರ, ಹಿರೇಹಳ್ಳಿ ವೀರಭದ್ರೇಶ್ವರ, ಚಿಕ್ಕಬಾಸೂರ ಸಿದ್ದರಾಮೇಶ್ವರ, ಸೂಡಂಬಿ ಈಶ್ವರದೇವರು, ಘಾಳಪೂಜೆ ಹನುಮಂತದೇವರು, ಈಶ್ವರದೇವರು, ಬುಡಪನಹಳ್ಳಿಯ ಕಾಶಿಮಂದಿರ, ಕೊಲ್ಲಾಪುರ ಪುಟ್ಟರಾಜ ದೇವಸ್ಥಾನ, ಶಿಡೇನೂರು, ಹಿರೇಹಳ್ಳಿ, ಮತ್ತೂರು ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿ ವಿಶೇಷ ಕಾರ್ಯಕ್ರಮಗಳು ನಿರಂತರವಾಗಿ ಜರುಗಿದವು.ಶಿವರಾತ್ರಿ ದಿನ ಶಿವನ ಧ್ಯಾನ ಸೇರಿದಂತೆ ಸರ್ವದೇವರುಗಳ ಪೂಜೆಗೆ ಹೆಚ್ಚು ಮಹತ್ವವಿದೆ. ಬಹುತೇಕ ಆರಾಧಕರು ಉಪವಾಸ ವ್ರತ ಕೈಗೊಂಡು ಆಚರಣೆಯಲ್ಲಿ ತೊಡಗುತ್ತಾರೆ. ಇಂತಹ ಶುಭದಿನ ವರ್ಷಕ್ಕೊಮ್ಮೆ ಬರಲಿದ್ದು, ಪ್ರತಿಯೊಬ್ಬರೂ ಭಗವಂತನ ಪ್ರೇರಣೆ ಪಡೆಯಬೇಕಿದೆ. ಶಿವ, ಶಿವ ಎನ್ನುವ ಪದವೆ ಭಕ್ತಿಗೆ ಸ್ಪೂರ್ತಿಯಂತಿದೆ. ಶಿವನಿಗೆ ಬಿಲ್ವಪತ್ರೆ ಅರ್ಪಣೆ, ಅಭಿಷೇಕದೊಂದಿಗೆ ಪಂಚಾಕ್ಷರಿ ಮಂತ್ರಪಠಣೆ ಮಾಡುವುದು ಈ ದಿನ ಫಲಪ್ರದವಾಗಿದೆ. ಸನಾನತ ಧರ್ಮದಲ್ಲಿ ಇದಕ್ಕೆ ವಿಶೇಷ ದಿನವೆಂದು ಕರೆಯಲಾಗುತ್ತಿದೆ ಎಂದು ಡಾ. ರಾಜಶೇಖರ ಹಾಲೇವಾಡಿಮಠ ಹೇಳಿದರು.