ಸಾರಾಂಶ
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಅವರು ಮುಂದಿನ ಜನ್ಮದವರೆಗೆ ಕಾಯದೆ ತಕ್ಷಣ ಯಾವುದಾದರೂ ಮಸೀದಿಗೆ ಹೋಗಿ ಮತಾಂತರಗೊಳ್ಳಲಿ. ಕೇವಲ ರಾಜಕೀಯಕ್ಕಾಗಿ ಅವರು ಈ ರೀತಿ ಹಿಂದೂ ಧರ್ಮವನ್ನು ಅವಹೇಳನ ಮಾಡಬೇಕಾಗಿಲ್ಲ ಎಂದು ಶಿವಸೇನಾ (ಏಕನಾಥ ಶಿಂಧೆ) ಕರ್ನಾಟಕದ ರಾಜ್ಯಾಧ್ಯಕ್ಷ, ಜೇವರ್ಗಿಯ ಶ್ರೀ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಉಡುಪಿ: ತಾನು ಮುಂದಿನ ಜನ್ಮದಲ್ಲಿ ಮುಸ್ಲೀಮನಾಗಿ ಹುಟ್ಟುತ್ತೇನೆ ಎಂದಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಅವರು ಮುಂದಿನ ಜನ್ಮದವರೆಗೆ ಕಾಯದೆ ತಕ್ಷಣ ಯಾವುದಾದರೂ ಮಸೀದಿಗೆ ಹೋಗಿ ಮತಾಂತರಗೊಳ್ಳಲಿ. ಕೇವಲ ರಾಜಕೀಯಕ್ಕಾಗಿ ಅವರು ಈ ರೀತಿ ಹಿಂದೂ ಧರ್ಮವನ್ನು ಅವಹೇಳನ ಮಾಡಬೇಕಾಗಿಲ್ಲ ಎಂದು ಶಿವಸೇನಾ (ಏಕನಾಥ ಶಿಂಧೆ) ಕರ್ನಾಟಕದ ರಾಜ್ಯಾಧ್ಯಕ್ಷ, ಜೇವರ್ಗಿಯ ಶ್ರೀ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸವಾಲು ಹಾಕಿದ್ದಾರೆ.ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಗಳ ಯಾವುದೇ ಹಬ್ಬದ ಸಂದರ್ಭದಲ್ಲಿ ಪೊಲೀಸರು ಹಿಂದು ನಾಯಕರಿಂದ 1 ಲಕ್ಷ ರು.ಗಳ ಬಾಂಡ್ ಜೊತೆಗೆ ‘ಇತರ ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ’, ‘ಘೋಷಣೆ ಕೂಗುವುದಿಲ್ಲ’ ಎಂದೆಲ್ಲಾ ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ, ಆದರೆ ಮುಸ್ಲೀಮರಿಂದ ಬರೆಸಿಕೊಳ್ಳುವುದಿಲ್ಲ, ಆದ್ದರಿಂದಲೇ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ, ಪಾಲೆಸ್ತೇನ್ ಧ್ವಜ, ಪಾಕ್ ಪರ ಘೋಷಣೆಯ ಘಟನೆಗಳು ನಡೆದಿವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ರಾಜ್ಯದಲ್ಲಿ ಭುಗಿಲೆದ್ದಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ತಾರ್ತಿಕವಾಗಿ ಅಂತ್ಯ ಕಾಣಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಆಕೆಗೆ ನ್ಯಾಯ ಸಿಗಬೇಕು ಎಂದರು.ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಆ.25ರಂದು ಉದ್ಘಾಟನೆಗೊಂಡಿದ್ದು, ಅದನ್ನು ಕರ್ನಾಟಕದಲ್ಲಿಯೂ ವಿಸ್ತರಿಸಲಾಗುತ್ತದೆ, ರಾಜ್ಯದಲ್ಲಿ ಶಿವಸೇನಾ ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಗಾಗಿ ರಾಜಕೀಯ ಪ್ರವೇಶಿಸುತ್ತದೆ ಮತ್ತು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್, ರಾಜ್ಯ ವಕ್ತಾರ ಭಾಸ್ಕರ್ ಜಿ., ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಮತ್ತು ಮಹಾಲಿಂಗಣ್ಣ ಗುಂಜಗಾವಿ ಮುಂತಾದವರಿದ್ದರು.