ಭಕ್ತರ ಮಂತ್ರಘೋಷಗಳೊಂದಿಗೆ ಸಿದ್ದರಾಮ ಶ್ರೀ ಪಲ್ಲಕ್ಕಿ ಉತ್ಸವ

| Published : May 13 2025, 01:21 AM IST

ಭಕ್ತರ ಮಂತ್ರಘೋಷಗಳೊಂದಿಗೆ ಸಿದ್ದರಾಮ ಶ್ರೀ ಪಲ್ಲಕ್ಕಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದು-ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಜಾತ್ರೆಯು ಸೋಮವಾರ ಸಹಸ್ರಾರು ಭಕ್ತರ ಹರ ಹರ ಮಹಾದೇವ, ಫಕೀರೇಶ್ವರ ಮಹಾರಾಜ ಕೀ ಜೈ ಎಂಬ ಮಂತ್ರಘೋಷಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು.

ಶಿರಹಟ್ಟಿ: ಹಿಂದು-ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಜಾತ್ರೆಯು ಸೋಮವಾರ ಸಹಸ್ರಾರು ಭಕ್ತರ ಹರ ಹರ ಮಹಾದೇವ, ಫಕೀರೇಶ್ವರ ಮಹಾರಾಜ ಕೀ ಜೈ ಎಂಬ ಮಂತ್ರಘೋಷಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು. ಶಿರಹಟ್ಟಿ ಸಂಸ್ಥಾನ ಮಠದ ೧೩ನೇ ಪಟ್ಟಾಧ್ಯಕ್ಷರಾದ ಫಕೀರ ಸಿದ್ದರಾಮ ಶ್ರೀಗಳು ಶ್ರೀಮಠದ ಸಂಪ್ರದಾಯದಂತೆ ಜಾತ್ರಾ ಮಹೋತ್ಸವದ ಪೂರ್ವದಲ್ಲಿ ಭಿಕ್ಷಾಟನೆಗಾಗಿ ಮಠದಿಂದ ಉತ್ಸವದೊಂದಿಗೆ ತೆರಳಿದ್ದರು.

ಸೋಮವಾರ ಬೆಳಗ್ಗೆ ಹರಿಪೂರ ಗ್ರಾಮವನ್ನು ಬಿಟ್ಟು ಶಿರಹಟ್ಟಿ ಪಟ್ಟಣದ ಮೇಗೇರಿ ಓಣಿಯಲ್ಲಿರುವ ಫಕೀರೇಶ್ವರ ಗದ್ದುಗೆ (ಪಾದಗಟ್ಟಿ) ತಲುಪಿ ಅಲ್ಲಿ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಪಲ್ಲಕ್ಕಿ ಉತ್ಸವ ೯-೩೦ಕ್ಕೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆಯೊಂದಿಗೆ ಮಠಕ್ಕೆ ಕರೆದುಕೊಂಡು ಹೋಗಲಾಯಿತು.

ಶ್ರೀಗಳು ಹರಿಪೂರ ಗ್ರಾಮವನ್ನು ಬಿಡುತ್ತಿದ್ದಂತೆ ಆನೆ, ಒಂಟೆ ಮತ್ತು ಕುದುರೆ ಹಾಗೂ ಭಜನೆ, ಡೊಳ್ಳು, ಜಾಂಜ್ ಮೇಳ ಸಕಲ ವಾದ್ಯಗಳೊಂದಿಗೆ ಬಹು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಶ್ರೀಗಳನ್ನು ಪಟ್ಟಣಕ್ಕೆ ಕರೆತರಲಾಯಿತು.

ಶ್ರೀಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಹರ್ಷೋದ್ಗಾರಗಳ ಮಧ್ಯೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರಿಗೆ ಶ್ರೀಗಳು ದರ್ಶನಾಶಿರ್ವಾದ ಮಾಡಿದರು.

ಶ್ರೀಗಳ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು ಪುನೀತರಾದರು. ಈ ಭಾಗದ ದೊಡ್ಡ ಜಾತ್ರೆಯಾಗಿದ್ದರಿಂದ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಸಂಜೆ ವರೆಗೂ ಆಗಮಿಸುತ್ತಿರುವುದು ಕಂಡುಬರುತ್ತಿತ್ತು. ಈ ಮೆರವಣಿಗೆಯಲ್ಲಿ ಹಲವಾರು ಕಲಾ ತಂಡಗಳು ಭಾಗವಹಿಸುವ ಮೂಲಕ ಮೂಲ ಜಾನಪದ ಕಲೆಗಳು ಅನಾವರಣಗೊಂಡವು.''''ದ್ವೇಷ ಬಿಡು ಪ್ರೀತಿ ಮಾಡು'''' ಎಂಬ ತತ್ವ ಸಂದೇಶ ಹೊತ್ತು ನಾಡಿನ ಹಿಂದೂ ಮುಸ್ಲಿಂರ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತಿರುವ ಫಕೀರ ಸಿದ್ದರಾಮ ಸ್ವಾಮಿಗಳು ಹಸಿದು ಬಂದವರಿಗೆ ಅನ್ನ ದಾಸೋಹ ನೀಡುತ್ತಿರುವುದು ಶ್ಲಾಘನೀಯ ಎಂದು ಭಕ್ತರು ಬಣ್ಣಿಸಿದರು.ಶ್ರೀ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮಿಗಳು, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಅಜ್ಜು ಯಲ್ಲಪ್ಪಗೌಡ ಪಾಟೀಲ ಹಾಗೂ ಊರಿನ ಪ್ರಮುಖರು, ಭಕ್ತಾಧಿಗಳು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.