ಕೈಗಾ, ಕಾರವಾರ, ದಾವಣಗೆರೆ, ಬಾಗಲಕೋಟೆಯಲ್ಲಿ ಮಾಕ್‌ಡ್ರಿಲ್‌

| Published : May 13 2025, 01:21 AM IST

ಸಾರಾಂಶ

ಯುದ್ಧದಂತಹ ವಿಪರೀತ ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಸೋಮವಾರ ಕಾರವಾರದ 5 ಸ್ಥಳಗಳಲ್ಲಿ ಮಾಕ್‌ಡ್ರಿಲ್‌ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಾರವಾರ/ದಾವಣಗೆರೆ/ಬಾಗಲಕೋಟೆ

ಯುದ್ಧದಂತಹ ವಿಪರೀತ ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಸೋಮವಾರ ಕಾರವಾರದ 5 ಸ್ಥಳಗಳಲ್ಲಿ ಮಾಕ್‌ಡ್ರಿಲ್‌ ನಡೆಸಲಾಯಿತು.

ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಕಟ್ಟಡ ಕುಸಿದು ಬಿದ್ದಾಗ ಸ್ಥಳದಲ್ಲಿದ್ದ ಜನರನ್ನು ರಕ್ಷಣೆ ಮಾಡುವ ಬಗ್ಗೆ, ಕೈಗಾ ಅಣುವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡದಿಂದ ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ, ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡದಿಂದ ರಕ್ಷಣಾ ಕಾರ್ಯಾಚರಣೆ, ಕಾರವಾರದ ರವೀಂದ್ರನಾಥ ಠಾಗೋರ ಬೀಚ್‌ನಲ್ಲಿ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ ನಡೆಸಲಾಯಿತು. ನಗರದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಕುರಿತು ಅಣಕು ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆಯಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಎನ್‌ಡಿಆರ್‌ಎಫ್, ಪೊಲೀಸ್, ಕರಾವಳಿ ಪೊಲೀಸ್, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕಂದಾಯ, ಆರೋಗ್ಯ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಂಜೆ 7.30 ರಿಂದ 8 ಗಂಟೆಯ ಅವಧಿಯಲ್ಲಿ ಬ್ಲ್ಯಾಕ್ ಔಟ್ ಕಾರ್ಯಾಚರಣೆ ನಡೆಸಲಾಯಿತು.

ಇದೇ ವೇಳೆ, ದಾವಣಗೆರೆಯ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿಯೂ ಮಾಕ್‌ಡ್ರಿಲ್‌ ನಡೆಯಿತು. ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿಯೂ ಸೋಮವಾರ ಮಾಕ್‌ಡ್ರಿಲ್‌ ನಡೆದಿದ್ದು, ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಂಚಾರಿ ಪೊಲೀಸ್, ಎನ್‌ಸಿಸಿ ಕಮಾಂಡ್‌ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

12ಕೆ10,11,12

ಕಾರವಾರದಲ್ಲಿ ಜನತೆಯ ರಕ್ಷಣಾ ಕಾರ್ಯಾಚರಣೆಯ ಮಾಕ್ ಡ್ರಿಲ್ ಯಶಸ್ವಿಯಾಗಿ ನೆರವೇರಿತು.