ಕೌಟುಂಬಿಕ ಹಾಕಿಗೆ ರಜತ ಸಂಭ್ರಮ: ನಾಳೆ ‘ಮುದ್ದಂಡ ಕಪ್ ಹಾಕಿ ಉತ್ಸವ’ ಲೋಗೋ ಬಿಡುಗಡೆ

| Published : Jan 10 2025, 12:45 AM IST

ಕೌಟುಂಬಿಕ ಹಾಕಿಗೆ ರಜತ ಸಂಭ್ರಮ: ನಾಳೆ ‘ಮುದ್ದಂಡ ಕಪ್ ಹಾಕಿ ಉತ್ಸವ’ ಲೋಗೋ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಲೋಗೋ ಬಿಡುಗಡೆ ಸಮಾರಂಭ ಶನಿವಾರ ಮಡಿಕೇರಿ ಕಾವೇರಿ ಹಾಲ್‌ನಲ್ಲಿ ನಡೆಯಲಿದೆ. ಹಾಕಿ ಉತ್ಸವ ಮಾ. 28 ರಂದು ಉದ್ಘಾಟನೆಗೊಳ್ಳಲಿದೆ. ಏ.29ರಂದು ಸಮಾರೋಪಗೊಳ್ಳಲಿದೆ. ಪಂದ್ಯಾವಳಿಗೆ ಸುಮಾರು 2.50 ಕೋಟಿ ರು. ಖರ್ಚಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಲೋಗೋ ಬಿಡುಗಡೆ ಸಮಾರಂಭ ಶನಿವಾರ ಮಡಿಕೇರಿ ಕಾವೇರಿ ಹಾಲ್‌ನಲ್ಲಿ ನಡೆಯಲಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದಂಡ ಕಪ್ ಹಾಕಿ ಹಬ್ಬದ ಅಧ್ಯಕ್ಷ ರಶಿನ್ ಸುಬ್ಬಯ್ಯ, ಮುದ್ದಂಡ ಒಕ್ಕದ ಪಟ್ಟೆದಾರ ಮುದ್ದಂಡ ಡಾಲಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಮಾರಂಭ ನಡೆಯಲಿದೆ ಎಂದರು.

ವಿರಾಜಪೇಟೆ ಶಾಸಕ ಅಜ್ಜಿಕುಟೀರ ಎಸ್.ಪೊನ್ನಣ್ಣ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ,

ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಉಪಸ್ಥಿತರಿರುವರು ಎಂದು ತಿಳಿಸಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎರಡು ಮೈದಾನ ಮತ್ತು ಪೊಲೀಸ್ ಮೈದಾನದಲ್ಲಿ ನಡೆಯಲಿರುವ ಮುದ್ದಂಡ ಕಪ್ ಹಾಕಿ ಉತ್ಸವ ಮಾ. 28 ರಂದು ಉದ್ಘಾಟನೆಗೊಳ್ಳಲಿದೆ. ಏ.29ರಂದು ಸಮಾರೋಪಗೊಳ್ಳಲಿದೆ. ಪಂದ್ಯಾವಳಿಗೆ ಸುಮಾರು 2.50 ಕೋಟಿ ರು. ಖರ್ಚಾಗುತ್ತಿದೆ ಎಂದರು.

ಮಹಿಳಾ ತಂಡಗಳೂ ಭಾಗಿ:

ಈ ಬಾರಿ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ಕೂಡ ನಡೆಯಲಿದೆ. ಸುಮಾರು 50-80 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಕಿ ಹಬ್ಬದ ಕೊನೆಯ 12 ದಿನಗಳ ಕಾಲ ಮಹಿಳಾ ಹಾಕಿ ನಡೆಯಲಿದೆ ಎಂದರು.

ಗೋಣಿಕೊಪ್ಪದಿಂದ ಮಡಿಕೇರಿಯವರೆಗೆ 45 ಕಿ.ಮೀ ದೂರದ ಸೈಕ್ಲಥಾನ್ ಕೂಡ ಆಯೋಜಿಸಲಾಗಿದೆ. ಪುರುಷರ ಹಾಕಿಗೆ 1,000 ಹಾಗೂ ಮಹಿಳಾ ಹಾಕಿಗೆ 500 ರು. ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಾಕಿ ಉತ್ಸವದ ಕಾರ್ಯದರ್ಶಿ ಮುದ್ದಂಡ ರಂಜಿತ್ ಪೊನ್ನಪ್ಪ ಮಾತನಾಡಿ, ಜ.12 ರಿಂದ ತಂಡಗಳ ನೊಂದಾಣಿ ಆರಂಭಗೊಳ್ಳಲಿದೆ. ಈಗಾಗಲೇ 500 ಕೊಡವ ಕುಟುಂಬಗಳು ಸಂಪರ್ಕದಲ್ಲಿದ್ದು, 400ಕ್ಕೂ ಅಧಿಕ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಸರ್ಕಾರದಿಂದ 1.50 ಕೋಟಿ ರು. ಅನುದಾನ ನಿರೀಕ್ಷೆ ಮಾಡುತ್ತಿದ್ದು, ಸದ್ಯದಲ್ಲೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಬೇಡಿಕೆ ಮಂಡಿಸಲಿದ್ದೇವೆ. ಹಾಕಿ ಉತ್ಸವಕ್ಕೆ

ಮೊದಲೇ ಅನುದಾನ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಬಾರಿ ಶೂಟಿಂಗ್ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದೆ. ಕೊಡವ ಸಮಾಜ, ಕೊಡವ ಕೇರಿ ಸೇರಿದಂತೆ ಎಲ್ಲಾ ಕೊಡವ ಕುಟುಂಬಗಳ ಸಹಕಾರವನ್ನು ಪಡೆದುಕೊಳ್ಳಲಾಗುತ್ತದೆ ಎಂದರು.

ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಕೊಡವ ಹಾಕಿ ಅಕಾಡೆಮಿ ‘ಮುದ್ದಂಡ ಹಾಕಿ ಉತ್ಸವ’ಕ್ಕೆ ಎಲ್ಲಾ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಮುದ್ದಂಡ ಡೀನ್ ಬೋಪಣ್ಣ ಹಾಗೂ ಸದಸ್ಯ ಮುದ್ದಂಡ ಟಿ.ಬೆಳ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.