ಸಿರುಗುಪ್ಪ: "ದೇವದಾಸಿ ಪದ್ಧತಿ ಕೇವಲ ಒಂದು ಸಾಮಾಜಿಕ ಪಿಡುಗಲ್ಲ, ಅದು ಮಹಿಳೆಯರ ಮೇಲಿನ ಶೋಷಣೆ. ಸರ್ಕಾರಗಳು ಕೇವಲ ಭರವಸೆಗಳನ್ನು ನೀಡದೆ, ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿಡುವ ಮೂಲಕ ಈ ಮಹಿಳೆಯರ ಸಮಗ್ರ ಪುನರ್ವಸತಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು " ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮರೆಡ್ ಎ. ಸಾಮಿ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆಯ ಶ್ರಮಿಕ ಭವನದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡ 5ನೇ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.ಸಮಾವೇಶದಲ್ಲಿ ದೇವದಾಸಿಯರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮಾಸಿಕ ಗೌರವಧನ ಹೆಚ್ಚಳ, ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಮಾಸಾಶನವನ್ನು ಕನಿಷ್ಠ ₹6,000ಕ್ಕೆ ಹೆಚ್ಚಿಸಬೇಕು. ವಸತಿ ರಹಿತ ಎಲ್ಲ ಮಾಜಿ ದೇವದಾಸಿಯರಿಗೆ ಉಚಿತವಾಗಿ ₹10ಲಕ್ಷ ಧನ ಸಹಾಯದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಬೇಕು. ದೇವದಾಸಿಯರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಹಾಗೂ ಆದ್ಯತೆ ನೀಡಬೇಕು. ದೇವದಾಸಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕಿಗಳಿಂದ ₹5 ಲಕ್ಷದ ವರೆಗೆ ಸಹಾಯಧನ ಸಾಲ ಸೌಲಭ್ಯವನ್ನು ಹೆಚ್ಚಿಸಬೇಕು. ದೇವದಾಸಿಯರ ಕುಟುಂಬಕ್ಕೆ 5 ಎಕರೆ ಜಮೀನು ಕೊಡಬೇಕು. ರಾಜ್ಯದಲ್ಲಿ ಬಾಕಿ ಉಳಿದಿರುವ ದೇವದಾಸಿಯರ ಗುರುತಿಸುವಿಕೆ ಪ್ರಕ್ರಿಯೆಯನ್ನು ತಕ್ಷಣವೇ ನಡೆಸಿ, ಹೊಸದಾಗಿ ಗುರುತಿಸಲ್ಪಟ್ಟವರಿಗೂ ಸರ್ಕಾರದ ಸೌಲಭ್ಯಗಳನ್ನು ವಿಸ್ತರಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸಿ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದರು.
ಸಮಾವೇಶದ ಕೊನೆಯಲ್ಲಿ ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ದೇವದಾಸಿಯರ ವಿಮೋಚನ ಸಂಘದ ತಾಲೂಕು ಅಧ್ಯಕ್ಷೆ ಕೆ. ಈರಮ್ಮ, ಸಿಐಯುಟಿ ಜಿಲ್ಲಾಧ್ಯಕ್ಷ ಎಚ್. ತಿಪ್ಪಯ್ಯ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಿ. ಮಾರುತಿ, ಸಿಐಯುಟಿ ತಾಲೂಕು ಸಹ ಕಾರ್ಯದರ್ಶಿ ಲತಿಫ್ ಖಾಜ, ಸದಸ್ಯರಾದ ಅಂಬಮ್ಮ, ಗಂಗಮ್ಮ, ಹುಲಿಗೆಮ್ಮ, ಈರಮ್ಮ, ಮಾಳಮ್ಮ, ದುರುಗಮ್ಮ ಭಾಗವಹಿಸಿದ್ದರು.