ಲಕ್ಷ್ಮೇಶ್ವರ: ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಡಾ. ನಂದಾ ಹಣಬರಟ್ಟಿ ಸೋಮವಾರ ಪಟ್ಟಣದಲ್ಲಿ ಬಿಎಲ್‌ಒಗಳೊಂದಿಗೆ ಮನೆಗಳಿಗೆ ತೆರಳಿ ಮತದಾರರಿಂದ ಎನ್ಯುಮರೇಷನ್ ಫಾರ್ಮ್ ಭರ್ತಿ, ದಾಖಲೆಗಳ ಪರಿಶೀಲನೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯನ್ನು ಅವಲೋಕಿಸಿದರು.
ಮನೆಗಳಲ್ಲಿ ಮತದಾರರೊಂದಿಗೆ ಮಾತನಾಡಿ, ಫಾರ್ಮ್ ಭರ್ತಿಯಲ್ಲಿ ಯಾವುದೇ ಸಮಸ್ಯೆಗಳಿವೆಯೇ ಎಂದು ಮಾಹಿತಿ ಪಡೆದು ಅಗತ್ಯ ಸಲಹೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಗೊಳಿಸುವ ಮಹತ್ವಾಕಾಂಕ್ಷಿ ಪ್ರಕ್ರಿಯೆಯಾಗಿದೆ ಎಂದರು.ಆ. ೮ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಯಾರೊಬ್ಬ ಅರ್ಹ ಮತದಾರರು ಮತದಾನದ ಪವಿತ್ರ ಹಕ್ಕಿನಿಂದ ಹೊರಗುಳಿಯಬಾರದು ಮತ್ತು ಅನರ್ಹರ ಹೆಸರು ಪಟ್ಟಿಯಲ್ಲುಳಿಬಾರದು. ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರ, ಜನಪ್ರತಿನಿಧಿಗಳ ಸಹಕಾರ, ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು ೯೬೦೧೬ ಮತದಾರರಿದ್ದು, ಎಲ್ಲರಿಗೂ ಎನ್ಯುಮರೇಷನ್ ಫಾರ್ಮ್ ತಲುಪಿಸುವ ಕಾರ್ಯದೊಂದಿಗೆ ಇದುವರೆಗೂ ೭೪೦೬೭ ಮತದಾರ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಈಗಾಗಲೇ ಶೇ. ೮೭ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದರು.ತಹಸೀಲ್ದಾರ್ ಧನಂಜಯ ಎಂ. ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮ, ಪ್ರಚಾರ, ಸಭೆ ಮಾಡಲಾಗಿದೆ. ತಾಲೂಕು ಹಂತದ ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ನಾಯಕ, ಮುಖಂಡ ಪದ್ಮರಾಜ ಪಾಟೀಲ, ಜಿ.ಆರ್. ಕೊಪ್ಪದ, ರಾಮು ಅಡಗಿಮನಿ, ಜೆ.ಎ. ಮನಿಯಾರ, ಪ್ರಶಾಂತ ಸನದಿ, ಸುಬೇದಖಾನ ಪಠಾಣ, ಬಿಎಲ್‌ಒ ಮಂಜುಳಾ ಚತ್ರದ, ಶಿಲ್ಪಾ ಸೇರಿ ಹಲವರು ಇದ್ದರು.