ಒಂಬತ್ತು ಬಾರಿ ಶಾಸಕರಾಗಿದ್ದೇನೆಂದು ಹೇಳುವ ನೀವು ಹಳಿಯಾಳ ಕ್ಷೇತ್ರಕ್ಕೆ ನೀಡಿರುವ ಶಾಶ್ವತ ಕೊಡುಗೆಯೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಿ.

ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಕಾಳಿನದಿ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಕಾರ್ಯಾರಂಭಿಸಬೇಕು ಮತ್ತು ಪ್ರತಿ ಟನ್ ಕಬ್ಬಿಗೆ ₹5500 ದರವನ್ನು ನಿಗದಿಪಡಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಹಳಿಯಾಳ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ರೈತ ಮೋರ್ಚಾದ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ರೈತರು ಬಾರಿ ಸಂಖ್ಯೆಯಲ್ಲಿ ಸೇರಿ ಹಕ್ಕೊತ್ತಾಯ ಮಂಡಿಸಿದರು. ಆದರೆ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಹಾಗೂ ಅವರ ಬೆಂಬಲಿಗರು ಭಾಗವಹಿಸದೇ ದೂರ ಉಳಿದಿದ್ದು ಚರ್ಚೆಗೆ ಗ್ರಾಸವಾಯಿತು.

ಪಕ್ಷದ ಕಾರ್ಯಾಲಯದಿಂದ ಶಿವಾಜಿ ವೃತದವರೆಗೆ ಪ್ರತಿಭಟನಾ ಮೆರಣಿಗೆಯು ನಡೆಯಿತು. ನಂತರ ಶಿವಾಜಿ ವೃತ್ತದಲ್ಲಿ ರಾಜ್ಯ ಹೆದ್ದಾರಿ ಮೇಲೆ ಪ್ರತಿಭಟನಾಕಾರರು ಕುಳಿತು ರಸ್ತೆತಡೆ ನಡೆಸಿ, ಸರ್ಕಾರ ಹಾಗೂ ಸ್ಥಳಿಯ ಶಾಸಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಅವರು, ಮುಂದಿನ ಎರಡೂ ತಿಂಗಳಲ್ಲಿ ಕಾಳಿನದಿ ನೀರಾವರಿ ಯೋಜನೆ ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಾರಂಭಿಸದಿದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಂದು ಎಚ್ಚರಿಸಿದರು.

ಒಂಬತ್ತು ಬಾರಿ ಶಾಸಕರಾಗಿದ್ದೇನೆಂದು ಹೇಳುವ ನೀವು ಹಳಿಯಾಳ ಕ್ಷೇತ್ರಕ್ಕೆ ನೀಡಿರುವ ಶಾಶ್ವತ ಕೊಡುಗೆಯೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಮಾತಿನಲ್ಲಿಯೇ ತಿವಿದರು.

ಬಿಜೆಪಿ ಜಿಲ್ಲಾಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಕುರುಬಗಟ್ಟಿ, ತಾಲೂಕು ಅಧ್ಯಕ್ಷ ಸೋನಪ್ಪ ಸುಣಕಾರ, ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಪ್ರಮುಖರಾದ ಚೂಡಪ್ಪ ಬೊಬಾಟೆ, ಪ್ರಶಾಂತ ನಾಯ್ಕ, ಸಂತಾನ ಸಾವಂತ, ಉದಯ ಜಾಧವ, ಡೊಂಗರು ಕೇಸರೇಕರ, ಗಣಪತಿ ಕರಂಜೇಕರ, ಜ್ಞಾನೇಶ ಮಾನಗೆ, ಬೊಬ್ಲಿ, ಮಹಿಳಾ ವಿಭಾಗದ ಸಂಗೀತಾ ಜಾವಳೇಕರ, ಜಯಲಕ್ಷ್ಮಿ ಚವ್ಹಾನ, ರತ್ನಮಾಲಾ ಮೂಳೆ, ಮಾಲಾ ಹುಂಡೇಕರ ಪ್ರಮುಖರು ಇದ್ದರು.