ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಆಸ್ಪತ್ರೆ ತೆರೆಯಲು ಈಗಿರುವ ಕ್ಲಿಷ್ಟಕರ ನೀತಿಯನ್ನು ತೊಡೆದುಹಾಕಲು ತಮ್ಮ ಸರ್ಕಾರ ಏಕಗವಾಕ್ಷಿ ಪದ್ಧತಿ ತರುವ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.ನಗರದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಇಂಟರ್ ನ್ಯಾಷನಲ್ ಲಿಂಗಾಯತ ಯುಥ್ ಫೋರಂ ಆಯೋಜಿಸಿದ್ದ ಡಾಕ್ಟರ್ ಎಂಟರಪ್ರೆನ್ಯೂರ್ ಸಮಾವೇಶ-2025ನ್ನು ಉದ್ಘಾಟಿಸಿ ಮಾತನಾಡಿದರು.
ಹಾಲಿ ವೈದ್ಯರು ಆಸ್ಪತ್ರೆ ಆರಂಭಿಸಲು ಕನಿಷ್ಟ 52 ಬಗೆಯ ಪರವಾನಿಗೆ ತೆಗೆದುಕೊಳ್ಳಬೇಕಾಗಿದೆ. ಇವುಗಳನ್ನು ಪಡೆಯುವಷ್ಟರಲ್ಲಿಯೇ ವೈದ್ಯರು ಸುಸ್ತಾಗುತ್ತಾರೆ. ಇದನ್ನು ತಪ್ಪಿಸಲು ಪರವಾನಿಗೆಗೆ ಸರಳ ವಿಧಾನ ಅನುಸರಿಸಲಾಗುವುದು ಎಂದು ಭರವಸೆ ನೀಡಿದರು.1960-70ರ ದಶಕದಲ್ಲೇ ರಾಜ್ಯದಲ್ಲಿ ದೂರಾಲೋಚನೆ ಹೊಂದಿದ್ದವರು ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ತೆರೆದು ಇಡೀ ದೇಶದ ಜನ ಕರ್ನಾಟಕದತ್ತ ತಮ್ಮ ಚಿತ್ತ ಹರಿಸುವಂತೆ ಮಾಡಿದ್ದರು. ಸರ್ಕಾರ ನೀಡದ ವೈದ್ಯಕೀಯ ಸೇವೆಯನ್ನು ಜನರಿಗೆ ಅವು ನೀಡುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ವೈದ್ಯರಲ್ಲಿ ಹೃದಯ ವೈಶಾಲ್ಯತೆ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಜನಸಾಮಾನ್ಯರು ವೈದ್ಯರಲ್ಲಿ ದೇವರನ್ನು ಕಾಣುತ್ತಿದ್ದರು. ವೈದ್ಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದೆ. ಅದನ್ನು ಕಾಪಾಡಿಕೊಳ್ಳುವುದು ವೈದ್ಯರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ವೈದ್ಯರ ವೃತ್ತಿ ಕವಲು ದಾರಿಯಲ್ಲಿದೆ. ಕಾಪೋರೇಟ್ ಕಂಪನಿಗಳು ಆಸ್ಪತ್ರೆ ತರೆಯಲು ಮುಂದಾಗಿದ್ದು, ಅವು ಕೇವಲ ಹಣದಾಸೆಗೆ ವಿನ: ಜನರ ಸೇವೆಗೆ ಅಲ್ಲ. ಸಾರ್ವಜನಿಕರು ಅದರಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂಬುದನ್ನು ಗಮನದಲ್ಲಿಡಬೇಕು. ವೈದ್ಯರೇ ಒಂದು ಗುಂಪಾಗಿ ಆಸ್ಪತ್ರೆ ಆರಂಭಿಸಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡಬೇಕು ಎಂದರು.ತಾವು ವೈದ್ಯಕೀಯ ಸಚಿವರಾದ ಮೇಲೆ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ತೀರ್ಮಾನಿಸಿದೆ. ಈಗಾಗಲೇ ೨೪ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಇದು ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆ ಒಡ್ಡಲು ಖಂಡಿತ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಮುಂದಿನ ಐದು ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಕ್ಯಾನ್ಸರ್, ಹೃದ್ರೋಗ, ಕ್ಷಯ ರೋಗ ಆಸ್ಪತ್ರೆ ತೆರೆಯಲಾಗುವುದು ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇಂದು ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಬಹು ತುಟ್ಟಿಯಾಗಿದೆ. ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ಸಿಗುವಂತಾಗಬೇಕು. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರತ್ಯೇಕ ಸರ್ಕಾರಿ ಆಸ್ಪತ್ರೆ ಸ್ಥಾಪನೆಗೆ ಕ್ರಮವಾಗಬೇಕು. ಈಗಿರುವ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು.ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ನಮ್ಮ ವೃತ್ತಿಗಷ್ಟೇ ನಾವು ಸೀಮಿತವಾಗಬಾರದು. ಸಾರ್ವಜನಿಕ-ಖಾಸಗಿ ಸಹಕಾರದೊಂದಿಗೆ ಲಿಂಗಾಯತ ಸಮುದಾಯದ ವೈದ್ಯರು ಸಮಾಜದ ಉನ್ನತಿಗೆ ಶ್ರಮಿಸಬೇಕು. ನಾನು ಈ ಸಂಘಟನೆಯ ಧ್ವನಿಯಾಗುವೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ, ಅನೇಕ ಬದಲಾವಣೆಗೆ ಶಕ್ತಿ ತುಂಬುವ ಕೆಲಸ ಈ ಸಮಾವೇಶದಿಂದಾಗಲಿ ಎಂದು ಆಶಿಸಿದರು.ಬೆಂಗಳೂರಿನ ರಾಮಯ್ಯ ಸ್ಮಾರಕ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ.ನಾಗೇಂದ್ರ ಸ್ವಾಮಿ ಆಶಯ ಭಾಷಣ ಮಾಡಿದರು.
ಶಾಸಕ ಡಾ.ಧನಂಜಯ ಸರ್ಜಿ, ಎಸ್.ಕೆ.ನವೀನ್ , ಐಲೈಫ್ ರಾಜ್ಯಾಧ್ಯಕ್ಷ ಸಂತೋಷ್ ಕೆಂಚಾಂಬಾ, ಶಾಲಿನಿ ನಾಲವಾಡ್, ಡಾ.ಅವಿನಾಶ್ ಬೆನಕಪ್ಪ ಕಿರಣಕುಮಾರ್ ಇದ್ದರು.