ಕನ್ನಡಪ್ರಭ ವಾರ್ತೆ ಹಳಿಯಾಳ

ಎಸ್ಐಆರ್ ಪರಿಷ್ಕರಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬುಧವಾರ ಪಟ್ಟಣದಲ್ಲಿ ತಾಪಂ ಮತ್ತು ತಾಲೂಕಾಡಳಿತದ ಸಹಯೋಗದಲ್ಲಿ ಪಟ್ಟಣದಲ್ಲಿ ಬೃಹತ್ ಬೈಕ್ ಜಾಥಾ ನಡೆಸಲಾಯಿತು.

ತಾಪಂ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ತಾಪಂ ಇಒ ವಿಲಾಸರಾಜ್ ಪ್ರಸನ್ನ ಹಾಗೂ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಕಡ್ಡಾಯವಾಗಿ ಈ ಮತಪರಿಷ್ಕರಣೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು, ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿ, ಅದರಲ್ಲಿ ತಪ್ಪಾಗಿದ್ದರೇ ತಿದ್ದುಪಡಿ ಮಾಡಿಸಿಕೊಳ್ಳಬೇಕು, ತನ್ಮೂಲಕ ಚುನಾವಣಾ ಆಯೋಗವು ಕೈಗೊಂಡಿರುವ ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದರು.

ತದನಂತರ ಪಟ್ಟಣದ ಬಸವೇಶ್ವರ ವೃತ್ತದಿಂದ ಸಾಗಿದ ಬೈಕ್ ಜಾಥಾವು ಶಿವಾಜಿ ವೃತ್ತದ ಮೂಲಕ, ಮಾರುಕಟ್ಟೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಬಸ್ ಸ್ಟ್ಯಾಂಡ್ ರಸ್ತೆಯ ಮೂಲಕ ಸಾಗಿ ನೂತನ ಬಸ್ ಸ್ಟ್ಯಾಂಡಿಗೆ ಬಂದು ತಲುಪಿತು. ಅಲ್ಲಿ ಸಾರ್ವಜನಿಕರಿಗೆ ಎಸ್.ಐ.ಆರ್ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ತದನಂತರ ಬೈಕ್ ಜಾಥಾವು ಚೆನ್ನಮ್ಮ ವೃತ್ತದಿಂದ ತಹಸೀಲ್ದಾರ ಕಚೇರಿಗೆ ತಲುಪಿ ಮುಕ್ತಾಯಗೊಂಡಿತು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಬಿಇಒ ಪ್ರಮೋದ ಮಹಾಲೆ, ಅಕ್ಷರ ದಾಸೋಹ ಅಧಿಕಾರಿ ಎಸ್. ನೂಲಿನ್, ಶಿರಸಿ ಶೈಕ್ಷಣಿಕ ಜಿಲ್ಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸತೀಷ್ ನಾಯ್ಕ ಬಾವಿಕೇರಿ, ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಿಡಿಒಗಳು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.